ಥೈಲ್ಯಾಂಡ್‌ನ ಉತ್ತೈ ಥಾನಿ ಪ್ರಾಂತ್ಯದಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಗಣಿತ ಪರೀಕ್ಷೆಯಲ್ಲಿ ಎರಡು ಅಂಕ ಕಡಿತಗೊಳಿಸಿದ್ದಕ್ಕೆ ಕೋಪಗೊಂಡ 17 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಗಸ್ಟ್ 5 ರಂದು ನಡೆದ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
11ನೇ ತರಗತಿಯ ವಿದ್ಯಾರ್ಥಿ ತನ್ನ ಗಣಿತ ಪರೀಕ್ಷೆಯಲ್ಲಿ 20ಕ್ಕೆ 18 ಅಂಕಗಳನ್ನು ಪಡೆದಿದ್ದನು. ಪರೀಕ್ಷೆಯಲ್ಲಿ ಪೂರ್ಣ ಅಂಕ ಏಕೆ ದೊರಕಿಲ್ಲ ಎಂದು ಕೇಳಲು ಶಿಕ್ಷಕಿಯ ಬಳಿ ಹೋಗಿದ್ದಾನೆ. ಈ ಬಗ್ಗೆ ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದ್ದು, ಶಿಕ್ಷಕಿ ವಿದ್ಯಾರ್ಥಿಗೆ ಉತ್ತರಗಳು ಸರಿಯಾಗಿದ್ದರೂ, ಪರೀಕ್ಷೆಯ ನಿಯಮಗಳ ಪ್ರಕಾರ ಕಾರ್ಯವಿಧಾನವನ್ನು ಬರೆಯದ ಕಾರಣ ಅಂಕ ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ಬೇರೆ ಶಿಕ್ಷಕರೊಂದಿಗೆ ಚರ್ಚಿಸಿದ ನಂತರ, ವಿದ್ಯಾರ್ಥಿ ಮತ್ತೆ ತರಗತಿಗೆ ಬಂದು ತನ್ನ ಅಂಕಗಳನ್ನು ಹೆಚ್ಚಿಸುವಂತೆ ಶಿಕ್ಷಕಿಯನ್ನು ಒತ್ತಾಯಿಸಿದ್ದಾನೆ. ಶಿಕ್ಷಕಿ ನಿರಾಕರಿಸಿದಾಗ, ವಿದ್ಯಾರ್ಥಿ ಕೋಪದಿಂದ ಮೇಜಿಗೆ ಒದ್ದು ತರಗತಿಯಿಂದ ಹೊರಗೆ ಹೋಗಿದ್ದಾನೆ. ನಂತರ ಕೆಲವು ನಿಮಿಷಗಳ ನಂತರ ಮರಳಿ ಬಂದು ಶಿಕ್ಷಕಿಯನ್ನು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾನೆ. ಶಿಕ್ಷಕಿ ಕ್ಷಮೆಯಾಚಿಸದಿದ್ದಾಗ, ವಿದ್ಯಾರ್ಥಿ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಗೂ ಕೆಲವೊಬ್ಬರು ಹಿರಿಯ ಶಿಕ್ಷಕರು ಸಹಾಯಕ್ಕೆ ನಿಂತಿದ್ದರು ಎಂದು ವರದಿಯಾಗಿದೆ.
ಶಾಲಾ ಸಮಯ ಮುಗಿದ ನಂತರ ನಡೆದ ಈ ಹಲ್ಲೆಯಿಂದ ಶಿಕ್ಷಕಿಯ ಎಡಗಣ್ಣಿಗೆ ಗಾಯ, ತಲೆಗೆ ಊತ ಮತ್ತು ಪಕ್ಕೆಲುಬುಗಳಲ್ಲಿ ನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆ ಕುರಿತು ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದು, ಶೀಘ್ರದಲ್ಲೇ ಅಧಿಕೃತ ಹೇಳಿಕೆ ನೀಡಲಿದ್ದಾರೆ. ವಿದ್ಯಾರ್ಥಿಯನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದ್ದು, ಆತ ಶಾಲೆಯಿಂದ ಟಿಸಿ ಕೇಳಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.