
ಕರಾಚಿ/ಪೇಶಾವರ: ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕರಾಚಿ ಮತ್ತು ಪೇಶಾವರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಸಾವನ್ನಪ್ಪಿ 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕರಾಚಿಯಲ್ಲಿ ವೈಮಾನಿಕ ಗುಂಡಿನ ದಾಳಿಗೆ ಹಿರಿಯ ನಾಗರಿಕ ಮತ್ತು 8 ವರ್ಷದ ಬಾಲಕಿ ಸೇರಿದಂತೆ ಮೂವರು ಬಲಿಯಾಗಿದ್ದಾರೆ.
ಮತ್ತೊಂದೆಡೆ, ಪೇಶಾವರದಿಂದ 30 ಕಿ.ಮೀ ದೂರದಲ್ಲಿರುವ ಹಸನ್ ಖೇಲ್ ಪೊಲೀಸ್ ಠಾಣೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಪೊಲೀಸರು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದು, ಉಗ್ರರು ಮತ್ತು ಪೊಲೀಸರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಈ ಘಟನೆಯ ನಂತರ ಪ್ರದೇಶದಲ್ಲಿ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ.
ಇದಲ್ಲದೆ, ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯ ವೇಳೆ ಕೆಲವರ ಮನೆಗಳ ಮೇಲೆ ದಾಳಿಯ ಪರಿಣಾಮ ಒಬ್ಬ ಮಹಿಳೆ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.