
ಜಕಾರ್ತಾ: ಇಂಡೋನೇಷ್ಯಾದ ಉತ್ತರ ಸುಲವೇಸಿಯಲ್ಲಿರುವ ತಾಲಿಸ್ ದ್ವೀಪದ ಸಮೀಪ 280 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕೆಎಂ ಬಾರ್ಸಿಲೋನಾ ವಿಎ (KM Barcelona VA) ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ದುರ್ಘಟನೆಯಲ್ಲಿ ಹಲವು ಪ್ರಯಾಣಿಕರು ನಾಪತ್ತೆಯಾಗಿದ್ದು, ದೊಡ್ಡ ಆತಂಕ ಸೃಷ್ಟಿಯಾಗಿದೆ.
ಮಧ್ಯಾಹ್ನ 1:30ರ ಸುಮಾರಿಗೆ ಸಂಭವಿಸಿದ ಈ ಘಟನೆಯಲ್ಲಿ, ಹಡಗಿನ ಡೆಕ್‌ಗಳಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದರಿಂದ ಭಯಭೀತರಾದ ಅನೇಕ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಲೈಫ್ ಜಾಕೆಟ್‌ಗಳನ್ನು ಧರಿಸಿ ಸಮುದ್ರಕ್ಕೆ ಹಾರಿದ್ದಾರೆ. ರಕ್ಷಣಾ ತಂಡಗಳು ಮತ್ತು ಸ್ಥಳೀಯ ಮೀನುಗಾರರ ನೆರವಿನಿಂದ ಈವರೆಗೆ ಸುಮಾರು 150 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ತಂಡದ ಹಿರಿಯ ಅಧಿಕಾರಿ ವೆರಿ ಅರಿಯಾಂಟೊ ತಿಳಿಸಿದ್ದಾರೆ. ಆದರೆ, ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದು, ಹಡಗಿನ ಒಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಪ್ರಯಾಣಿಕ ಅಬ್ದುಲ್ ರಹಮದ್ ಅಗು ಅವರು ಫೇಸ್‌ಬುಕ್ ಲೈವ್‌ಸ್ಟ್ರೀಮ್ ಮೂಲಕ ಹಡಗಿನಲ್ಲಿ ಬೆಂಕಿ ಅವಘಡದ ಭೀಕರ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಸಮುದ್ರಕ್ಕೆ ಹಾರಿದವರಲ್ಲಿ ಅಬ್ದುಲ್ ರಹಮದ್ ಕೂಡ ಒಬ್ಬರು. ತಮ್ಮ ವೀಡಿಯೊದಲ್ಲಿ, “ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ, ನಮಗೆ ಸಹಾಯ ಮಾಡಿ” ಎಂದು ಅವರು ತೀವ್ರವಾಗಿ ವಿನಂತಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.