
ಉಡುಪಿ, ಮೇ 3: ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಡ್ಡಿನಂಗಡಿ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಹಾಗೂ ಸರಕಾರಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯು ಸಂಜೆ ಹೊತ್ತಿನಲ್ಲಿ ನಡೆದಿದ್ದು, ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.
ಮಾಹಿತಿಯಂತೆ, ಕಾರು ಚಾಲಕ ಕಾರ್ಕಳದಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದರೆ, ಬಸ್ಸು ಉಡುಪಿಯಿಂದ ಧರ್ಮಸ್ಥಳದತ್ತ ಸಾಗುತ್ತಿತ್ತು. ನೀರೆ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಬಸ್ಸಿಗೆ ಡಿಕ್ಕಿಯಾದ ಪರಿಣಾಮ, ಬಸ್ ಚಾಲಕ ಅಪಘಾತ ತಪ್ಪಿಸಲು ಪ್ರಯತ್ನಿಸಿ ವಾಹನವನ್ನು ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಈ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರು ಚಾಲಕನ ಸ್ಥಿತಿ ಗಂಭೀರವಾಗಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವು ಕಾರ್ಕಳ ಮೂಲದವರು ಎನ್ನಲಾಗಿದ್ದು, ಇನ್ನೂ ಹೆಚ್ಚಿನ ವಿವರಗಳಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.