
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಉಸ್ಮಾನಪುರದಲ್ಲಿ ಪತ್ನಿಯೇ ಗಂಡನನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಖಲೀಲ್ ಹುಸೇನ್ (44) ಎಂಬವರು ಕಣಗಲ್ ಮಂಡಲದ ಚಾರ್ಲಗೌರರಂ ಸರಕಾರಿ ಪ್ರೌಢಶಾಲೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಸ್ವಲ್ಪ ಮಾನಸಿಕ ಅಸ್ವಸ್ಥತೆ ಹಾಗೂ ಕುಡಿತದ ಚಟವಿದ್ದ ಖಲೀಲ್‌ನ ವರ್ತನೆಯಿಂದ ಬೇಸತ್ತ ಪತ್ನಿ, ಮಕ್ಕಳಿಗಾದರೂ ಸರಕಾರಿ ಉದ್ಯೋಗ ದೊರೆಯಲಿ ಎಂಬ ಆಶಯದಿಂದ ಪತಿಯನ್ನು ಕೊಲೆ ಮಾಡಿ ಅದನ್ನು ಸಹಜ ಸಾವಿನಂತೆ ಬಿಂಬಿಸಲು ಯತ್ನಿಸಿದ್ದಾಳೆ.
ಘಟನೆಯ ಬಳಿಕ ಖಲೀಲ್ ಹುಸೇನ್ ಅವರ ತಾಯಿ ಮೊಹಮ್ಮದ್ ಬೇಗಂ ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಕೂಡಲೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ತಿಂಗಳ 7ನೇ ತಾರೀಕಿನಂದು ಬಂದ ವರದಿಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಖಲೀಲ್ ಸಾವಿಗೀಡಾಗಿದ್ದರೆಂದು ತಿಳಿದುಬಂದಿದೆ.
ಪೊಲೀಸರ ವಿಚಾರಣೆಯಲ್ಲಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಆಕೆಯನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.