
ಪತಿ ನಪುಂಸಕ ಎಂದು ಆರೋಪಿಸಿ ವಿಚ್ಛೇದನ ಮತ್ತು ₹90 ಲಕ್ಷ ಜೀವನಾಂಶ ಕೋರಿದ್ದ ಮಹಿಳೆಯೊಬ್ಬರಿಗೆ ತೆಲಂಗಾಣ ಹೈಕೋರ್ಟ್ ಭಾರಿ ಹಿನ್ನಡೆ ಉಂಟುಮಾಡಿದೆ. ಪತಿಯ ನಿಮಿರುವಿಕೆಯ ಸಮಸ್ಯೆ ಕುರಿತು ದಂಪತಿ ಮದುವೆಯಾಗಿ ಐದು ವರ್ಷಗಳ ನಂತರ ಆರೋಪ ಮಾಡಿರುವ ಮಹಿಳೆಯ ವಾದವನ್ನು ಕೋರ್ಟ್ ತಳ್ಳಿಹಾಕಿದೆ. ಈ ಕುರಿತು ನ್ಯಾಯಾಲಯ ನೀಡಿರುವ ತೀರ್ಪು, ಕುಟುಂಬ ನ್ಯಾಯಾಲಯದ ನಿರ್ಧಾರವನ್ನು ಎತ್ತಿಹಿಡಿದಿದೆ.
ಪ್ರಕರಣದ ವಿವರಗಳು
- 2013ರ ಡಿಸೆಂಬರ್‌ನಲ್ಲಿ ವಿವಾಹವಾದ ದಂಪತಿ.
- ಮದುವೆಯ ನಂತರ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು ಮಹಿಳೆಯ ಆರೋಪ.
- ಪತಿ ತಮ್ಮ ನಿಮಿರುವಿಕೆಯ ಸಮಸ್ಯೆಯ ಬಗ್ಗೆ ಮದುವೆಗೂ ಮುನ್ನ ಹೇಳಿರಲಿಲ್ಲ ಎಂದು ಮಹಿಳೆಯ ವಾದ.
- ಪತಿ ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿದ್ದು, ಇದು ನಿಮಿರುವಿಕೆಯ ಸಮಸ್ಯೆಗೆ ಕಾರಣ ಎಂದು ಮಹಿಳೆಯ ಆರೋಪ.
- ಇದನ್ನು ಹಿಂದೂ ವಿವಾಹ ಕಾಯ್ದೆ 1955 ರ ಅಡಿಯಲ್ಲಿ ಕ್ರೌರ್ಯಕ್ಕೆ ಸಮ ಎಂದು ಹೇಳಿ, ವಿಚ್ಛೇದನ ಮತ್ತು ₹90 ಲಕ್ಷ ಶಾಶ್ವತ ಜೀವನಾಂಶ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೋರ್ಟ್ ಹೇಳಿದ್ದೇನು?
ಪತಿಯ ವಂಚನೆ ಅಥವಾ ನಪುಂಸಕತೆಗೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಬಿ.ಆರ್. ಮಧುಸೂಧನ್ ರಾವ್ ಅವರ ಪೀಠವು ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೆ, ಮದುವೆಯಾಗಿ ಐದು ವರ್ಷಗಳ ನಂತರ ಇಂತಹ ಆರೋಪ ಮಾಡುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ. ಪತಿಯು ತಮ್ಮ ಲೈಂಗಿಕ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದಿದ್ದು, ಹಲವು ಸಂದರ್ಭಗಳಲ್ಲಿ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂದು ಕೋರ್ಟ್‌ಗೆ ತಿಳಿಸಿದ್ದರು.