
ಹೈದರಾಬಾದ್: ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ವಿಜೇತ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ‘ಆರ್‌ಆರ್‌ಆರ್’ ಚಿತ್ರದ ‘ನಾಟು ನಾಟು’ ಹಾಡಿಗೆ ಧ್ವನಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ತೆಲಂಗಾಣದ ಗಾಯಕ ರಾಹುಲ್ ಸಿಪ್ಲಿಗಂಜ್‌ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಇತ್ತೀಚೆಗೆ ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ರಾಹುಲ್ ಸಿಪ್ಲಿಗಂಜ್ ಅವರನ್ನು ವಿಶೇಷವಾಗಿ ಉಲ್ಲೇಖಿಸಿದ್ದರು ಮತ್ತು ಶೀಘ್ರದಲ್ಲೇ ಸರ್ಕಾರದಿಂದ ಘೋಷಣೆ ಹೊರಬೀಳಲಿದೆ ಎಂದು ಭರವಸೆ ನೀಡಿದ್ದರು. ಅದರಂತೆ, ಭಾನುವಾರ ಪಾತಬಸ್ತಿ ಬೋನಾಲ ಹಬ್ಬದ ಸಂದರ್ಭದಲ್ಲಿ ಈ ಬಹುಮಾನವನ್ನು ಘೋಷಿಸಲಾಗಿದೆ.
ರಾಹುಲ್ ಸಿಪ್ಲಿಗಂಜ್ ಅವರು ಬಿಗ್ ಬಾಸ್ ವಿನ್ನರ್ ಎಂಬ ಕಾರಣಕ್ಕೆ ಈ ಬಹುಮಾನ ನೀಡಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಬದಲಿಗೆ, ಪಾತಬಸ್ತಿಯ ಸಾಮಾನ್ಯ ಹುಡುಗನಾಗಿ ತಮ್ಮ ಪ್ರಯಾಣವನ್ನು ಆರಂಭಿಸಿ, ತಮ್ಮ ಸ್ವಂತ ಪರಿಶ್ರಮದಿಂದ ‘ಆರ್‌ಆರ್‌ಆರ್’ ಸಿನಿಮಾದ ‘ನಾಟು ನಾಟು’ ಹಾಡಿನ ಮೂಲಕ ಆಸ್ಕರ್ ವೇದಿಕೆಯವರೆಗೂ ತಲುಪಿ, ಹಾಡುವ ಅಪರೂಪದ ಗೌರವವನ್ನು ಪಡೆದಿದ್ದಾರೆ. ಅವರ ಈ ಸಾಧನೆಯು ತೆಲಂಗಾಣದ ಯುವಕರಿಗೆ ಮಾರ್ಗದರ್ಶಕವಾಗಿದೆ ಎಂದು ಮುಖ್ಯಮಂತ್ರಿ ಶ್ಲಾಘಿಸಿದ್ದಾರೆ. ರಾಹುಲ್ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಗಾಯಕರಾಗಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.