
ನವದೆಹಲಿ: ಭಾರತದ ಅತಿದೊಡ್ಡ ಐಟಿ ಸೇವಾ ಪೂರೈಕೆದಾರ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ತನ್ನ ಕಾರ್ಯಪಡೆಯ ರಚನೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ. ಈ ತೀರ್ಮಾನದ ಭಾಗವಾಗಿ, ಕಂಪನಿಯು ಜಾಗತಿಕವಾಗಿ ಸುಮಾರು 12,000 ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗಿದೆ.
ಕಂಪನಿಯ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಕೌಶಲ್ಯಗಳನ್ನು ನವೀಕರಿಸಲು ವಿಫಲರಾದ ಮತ್ತು ಹಳೆಯ ತಂತ್ರಜ್ಞಾನಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳ ಮೇಲೆ ಈ ವಜಾ ನಿರ್ಧಾರವು ಪರಿಣಾಮ ಬೀರಲಿದೆ ಎಂದು ಟಿಸಿಎಸ್ ಸ್ಪಷ್ಟಪಡಿಸಿದೆ. ತಂತ್ರಜ್ಞಾನ ಮತ್ತು ಯಾಂತ್ರೀಕರಣದಲ್ಲಿನ ಕ್ಷಿಪ್ರ ಬೆಳವಣಿಗೆಯೇ ಈ ನಿರ್ಧಾರಕ್ಕೆ ಮುಖ್ಯ ಕಾರಣವಾಗಿದೆ.
ವಜಾಗೊಳ್ಳುವ ನೌಕರರು ಯಾವುದೇ ತೊಂದರೆ ಅನುಭವಿಸಬಾರದು ಎಂಬ ದೃಷ್ಟಿಯಿಂದ, ಕಂಪನಿಯು ಆಕರ್ಷಕ ಸೆವೆರೆನ್ಸ್ ಪ್ಯಾಕೇಜ್ (Severance Package) ಅನ್ನು ಪ್ರಕಟಿಸಿದೆ. ಈ ಪ್ಯಾಕೇಜ್‌ನಡಿ, ಉದ್ಯೋಗಿಗಳಿಗೆ ಮೊದಲು ಮೂರು ತಿಂಗಳ ನೋಟಿಸ್ ಅವಧಿಯ ಸಂಬಳ ಲಭಿಸುತ್ತದೆ. ಇದರ ನಂತರ, ಅವರ ಸೇವೆಯ ಅವಧಿಯನ್ನು ಆಧರಿಸಿ ಆರು ತಿಂಗಳಿಂದ ಎರಡು ವರ್ಷಗಳವರೆಗೆ ಮುಂಗಡ ವೇತನವನ್ನು ನೀಡಲಾಗುವುದು.
ಸಂಸ್ಥೆಯಲ್ಲಿ 15 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಹಿರಿಯ ಉದ್ಯೋಗಿಗಳಿಗೆ ಗರಿಷ್ಠ ಎರಡು ವರ್ಷಗಳ ಸಂಬಳ ಸಿಗುವ ಸಾಧ್ಯತೆ ಇದೆ. ಆದರೆ, ಯಾವುದೇ ಪ್ರಾಜೆಕ್ಟ್‌ಗಳಿಗೆ ನಿಯೋಜನೆಯಾಗದೆ ಎಂಟು ತಿಂಗಳಿಗಿಂತ ಹೆಚ್ಚು ಕಾಲ ‘ಬೆಂಚ್’ ಮೇಲೆ ಉಳಿದಿರುವ ಉದ್ಯೋಗಿಗಳಿಗೆ ಕೇವಲ ಮೂರು ತಿಂಗಳ ನೋಟಿಸ್ ಅವಧಿಯ ಸಂಬಳ ಮಾತ್ರ ಸಿಗಲಿದೆ. ಈ ಕ್ರಮದಿಂದಾಗಿ ವಜಾಗೊಳ್ಳುವವರಿಗೆ ಹೊಸ ಉದ್ಯೋಗವನ್ನು ಹುಡುಕಲು ಸಾಕಷ್ಟು ಆರ್ಥಿಕ ಬೆಂಬಲ ಮತ್ತು ಸಮಯ ಸಿಗುತ್ತದೆ ಎಂದು ಟಿಸಿಎಸ್ ಆಶಿಸಿದೆ.



































