
ಚೆನ್ನೈ: ತಮಿಳುನಾಡು ವಿಧಾನಸಭೆಯ ಬಜೆಟ್ ಅಧಿವೇಶನದ ಆರಂಭದ ದಿನವೇ ರಾಜ್ಯಪಾಲ ಆರ್.ಎನ್. ರವಿ ಮತ್ತು ಡಿಎಂಕೆ ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದೆ. ಮಂಗಳವಾರ (ಜ. 20, 2026) ಸದನವನ್ನುದ್ದೇಶಿಸಿ ಭಾಷಣ ಮಾಡಬೇಕಿದ್ದ ರಾಜ್ಯಪಾಲರು, ರಾಷ್ಟ್ರಗೀತೆಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಿ ಭಾಷಣ ಮಾಡದೆಯೇ ಅಧಿವೇಶನದಿಂದ ಹೊರನಡೆದಿದ್ದಾರೆ.
ಸತತ ಮೂರನೇ ವರ್ಷವೂ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಪೂರ್ಣವಾಗಿ ಓದದೆ ರಾಜ್ಯಪಾಲರು ನಿರ್ಗಮಿಸಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಧಿವೇಶನದ ಆರಂಭದಲ್ಲಿ ರಾಷ್ಟ್ರಗೀತೆ ನುಡಿಸುವಂತೆ ರಾಜ್ಯಪಾಲರು ಮಾಡಿದ ಮನವಿಯನ್ನು ಸ್ಪೀಕರ್ ಎಂ. ಅಪ್ಪಾವು ನಿರಾಕರಿಸಿದರು ಎನ್ನಲಾಗಿದೆ. ಸಂಪ್ರದಾಯದಂತೆ ತಮಿಳು ನಾಡಗೀತೆಯೊಂದಿಗೆ (ತಮಿಳು ಥಾಯ್ ವಝು) ಕಲಾಪ ಆರಂಭವಾಗಿದ್ದು ರಾಜ್ಯಪಾಲರ ಅಸಮಾಧಾನಕ್ಕೆ ಕಾರಣವಾಯಿತು.
ಲೋಕ ಭವನದ ಸ್ಪಷ್ಟನೆ: ರಾಜ್ಯಪಾಲರ ಕಚೇರಿಯಾದ ಲೋಕ ಭವನವು (ಹಿಂದಿನ ರಾಜ್ ಭವನ) ಈ ಕುರಿತು 13 ಅಂಶಗಳ ಸುದೀರ್ಘ ಪ್ರಕಟಣೆ ಬಿಡುಗಡೆ ಮಾಡಿದೆ. “ರಾಜ್ಯಪಾಲರ ಮೈಕ್ರೊಫೋನ್ ಅನ್ನು ಪದೇ ಪದೇ ಆಫ್ ಮಾಡಲಾಗಿತ್ತು ಮತ್ತು ಅವರಿಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡಲಿಲ್ಲ. ಸರ್ಕಾರದ ಭಾಷಣದಲ್ಲಿ ಹೂಡಿಕೆಗಳ ಕುರಿತು ಆಧಾರರಹಿತ ಅಂಕಿಅಂಶಗಳಿದ್ದವು. ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವ ಗಂಭೀರ ವಿಷಯಗಳನ್ನು ಭಾಷಣದಲ್ಲಿ ಕೈಬಿಡಲಾಗಿತ್ತು” ಎಂದು ಲೋಕ ಭವನ ದೂರಿದೆ. ಅಲ್ಲದೆ, ರಾಷ್ಟ್ರಗೀತೆಗೆ ಆದ್ಯತೆ ನೀಡದಿರುವುದು ಸಾಂವಿಧಾನಿಕ ಕರ್ತವ್ಯದ ಉಲ್ಲಂಘನೆ ಎಂದು ಬಣ್ಣಿಸಿದೆ.
ಸಿಎಂ ಸ್ಟಾಲಿನ್ ಆಕ್ರೋಶ: ರಾಜ್ಯಪಾಲರ ಈ ನಡೆಯನ್ನು ಕಟುವಾಗಿ ಟೀಕಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, “ರಾಜ್ಯಪಾಲರು ಸದನದ 100 ವರ್ಷಗಳ ಸಂಪ್ರದಾಯವನ್ನು ಗಾಳಿಗೆ ತೂರಿದ್ದಾರೆ. ಅವರ ನಡವಳಿಕೆ ಬಾಲಿಶತನದಿಂದ ಕೂಡಿದೆ” ಎಂದಿದ್ದಾರೆ. ಅಲ್ಲದೆ, ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣಕ್ಕೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಸೇರಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಸ್ಟಾಲಿನ್, ರಾಜ್ಯಪಾಲರ ಭಾಷಣದ ಇಂಗ್ಲಿಷ್ ಆವೃತ್ತಿಯನ್ನು ದಾಖಲೆಗೆ ಸೇರಿಸುವ ನಿರ್ಣಯವನ್ನು ಮಂಡಿಸಿದರು.



































