
ಚೆನ್ನೈ:ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರವು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ತಂದಿದೆ. ಹಿಂದೂ ದೇವಾಲಯಗಳ ಸ್ವತ್ತನ್ನು ಕೇವಲ ಆಯಾ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂಬ ದೃಢ ನಿಲುವನ್ನು ಸರ್ಕಾರ ಪ್ರಕಟಿಸಿದೆ. ಈ ಮೂಲಕ ಇತರೆ ಸಾರ್ವಜನಿಕ ಅಥವಾ ಸರ್ಕಾರಿ ಯೋಜನೆಗಳಿಗೆ ಆಲಯದ ಹಣವನ್ನು ವಿನಿಯೋಗಿಸುವುದಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗಿದೆ.
ಹಿಂದಿನ ದ್ರಾವಿಡ ಮುನ್ನೇತ್ರ ಕಳಗಂ (DMK) ಸರ್ಕಾರವು ರೂಪಿಸಿದ್ದ ಬಹುಕೋಟಿ ವೆಚ್ಚದ ಕಾಮಗಾರಿಗಳನ್ನು ನೂತನ ಆಡಳಿತವು ಅಧಿಕೃತವಾಗಿ ರದ್ದುಗೊಳಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ದೇವಸ್ಥಾನಗಳ ನಿಧಿಯಿಂದ ವಾಣಿಜ್ಯ ಉದ್ದೇಶದ ಕಟ್ಟಡಗಳನ್ನು ನಿರ್ಮಿಸಲು ಅನುಮತಿ ನೀಡಲಾಗಿತ್ತು. ಆದರೆ, ಈ ನಿರ್ಧಾರದಿಂದ ದೇವಾಲಯಗಳ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬುದನ್ನು ಮನಗಂಡು ಹೊಸ ಆದೇಶ ಹೊರಡಿಸಲಾಗಿದೆ.
ಶುಕ್ರವಾರ ಬಿಡುಗಡೆಯಾಗಿರುವ ಅಧಿಕೃತ ಆದೇಶದನ್ವಯ, ಸುಮಾರು 245.85 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ತಕ್ಷಣದಿಂದಲೇ ಕೈಬಿಡಲಾಗಿದೆ. ಈ ಯೋಜನೆಗಳಿಗೆ ಈ ಹಿಂದೆ ಮಂಜೂರಾತಿ ಸಿಕ್ಕಿದ್ದರೂ, ಇನ್ನುಳಿದ ತಾಂತ್ರಿಕ ಕಾರಣಗಳು ಹಾಗೂ ಕಾನೂನು ಪ್ರಕ್ರಿಯೆಗಳಿಂದಾಗಿ ಕಾಮಗಾರಿಗಳು ಆರಂಭವಾಗಿರಲಿಲ್ಲ. ಹೊಸ ಸರ್ಕಾರದ ಈ ನೀತಿ ಬದಲಾವಣೆಯು ರಾಜ್ಯದ ಧಾರ್ಮಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಮುಖ್ಯಾಂಶಗಳು
- ಕೋಟಿಗಳ ಯೋಜನೆ ರದ್ದು: ಒಟ್ಟು 245.85 ಕೋಟಿ ರೂಪಾಯಿ ವೆಚ್ಚದ ಧಾರ್ಮಿಕ ದತ್ತಿ ಇಲಾಖೆಯ ಕಾಮಗಾರಿಗಳ ರದ್ದು.
- ಕಲ್ಯಾಣ ಮಂಟಪಗಳು: 115.77 ಕೋಟಿ ರೂಪಾಯಿ ಅಂದಾಜು ವೆಚ್ಚದ 29 ಕಲ್ಯಾಣ ಮಂಟಪಗಳ ನಿರ್ಮಾಣ ಯೋಜನೆಗೆ ತಡೆ.
- ವಾಣಿಜ್ಯ ಸಂಕೀರ್ಣಗಳು: 130.08 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿದ್ದ 17 ಕಾಂಪ್ಲೆಕ್ಸ್ ಯೋಜನೆಗಳು ವಾಪಸ್.
- ಆರ್ಥಿಕ ಹೊರೆಗೆ ಬ್ರೇಕ್: ದೇವಸ್ಥಾನಗಳ ಹಣವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದರಿಂದ ಉಂಟಾಗುವ ಆರ್ಥಿಕ ನಷ್ಟ ತಡೆಯಲು ಕ್ರಮ.
ತಮಿಳುನಾಡು ಟಿವಿಕೆ ಸರ್ಕಾರದ ನೂತನ ದೇವಸ್ಥಾನ ನೀತಿ
ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಸಿಎಂ ವಿಜಯ್ ನೇತೃತ್ವದ ಸರ್ಕಾರವು ದೇವಸ್ಥಾನಗಳ ಸ್ವಾಯತ್ತತೆ ಹಾಗೂ ನಿಧಿಯ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದೆ. ದೇಗುಲದ ಆದಾಯವನ್ನು ಕೇವಲ ಧಾರ್ಮಿಕ ವಿಧಿವಿಧಾನಗಳು, ಭಕ್ತರ ಸೌಕರ್ಯಗಳು ಮತ್ತು ಆಲಯದ ಜೀರ್ಣೋದ್ಧಾರಕ್ಕೆ ಮಾತ್ರ ಮೀಸಲಿಡಬೇಕು ಎಂಬುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.
ಕಾನೂನು ತೊಡಕು ಹಾಗೂ ಆರ್ಥಿಕ ನಷ್ಟದ ಭೀತಿ
ರದ್ದುಗೊಂಡಿರುವ 46 ಯೋಜನೆಗಳು ಈಗಾಗಲೇ ಹಲವು ಕಾನೂನು ವಿವಾದಗಳನ್ನು ಎದುರಿಸುತ್ತಿದ್ದವು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಮಗಾರಿಗಳನ್ನು ಮುಂದುವರಿಸಿದರೆ ದೇವಸ್ಥಾನಗಳಿಗೆ ಭಾರಿ ಪ್ರಮಾಣದ ಆರ್ಥಿಕ ಹೊರೆಯಾಗುವ ಸಂಭವವಿತ್ತು. ಹಾಗಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಧಾರ್ಮಿಕ ನೀತಿಯ ಅನುಸಾರ ಈ ಕಠಿಣ ಕ್ರಮ ಅನಿವಾರ್ಯವಾಗಿತ್ತು ಎಂದು ಸರ್ಕಾರ ತಿಳಿಸಿದೆ.
































