
ಕಾರ್ಕಳ : ಪೆರ್ವಾಜೆ ಸುಂದರ್ ಪುರಾಣಿಕ್ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಪ್ರದೀಪ್ ರವರು , ನಾಡಪ್ರಭು ಕೆಂಪೇಗೌಡರು ದೇಶದ ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಚರಿತ್ರೆಯಲ್ಲಿರುವ ಮಹತ್ವದ ನಾಯಕರಾಗಿದ್ದು, ಅವರ ದೂರದೃಷ್ಟಿ ಹಾಗೂ ಪ್ರಜೆಪರ ಆಡಳಿತ ನಮಗೆಲ್ಲಾ ಮಾದರಿಯಾಗಿದೆ ಅವರು ತಮ್ಮ ಆಡಳಿತದಲ್ಲಿ ಸಾಮಾಜಿಕ ಸಾಮರಸ್ಯ, ಆರ್ಥಿಕ ಪ್ರಗತಿ, ಅಭಿವೃದ್ಧಿಗೆ ಉತ್ತೇಜನ ನೀಡಿದ್ದು, ಇಂದು ಬೆಂಗಳೂರು ಮಹಾನಗರವಾಗಲು ಅವರ ಕೊಡುಗೆ ಅಪಾರ” ಎಂದು ಹೇಳಿದರು.
ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ, ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳು ನಡೆದಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಕಳ ಎಎಸ್‌ಪಿ ಡಾ. ಹರ್ಷ ಪ್ರಿಯಂವದ, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟೊ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ಶಾಲೆಯ ಮುಖ್ಯಶಿಕ್ಷಕ ದಿವಾಕರ್ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕ ಗಣೇಶ್ ಜಲ್ಸೂರ್ ರವರು ಕೆಂಪೇಗೌಡರ ಜೀವನವೈಭವದ ಕುರಿತು ವಿಶ್ಲೇಷಣಾತ್ಮಕ ಉಪನ್ಯಾಸ ನೀಡಿದರೆ, ಶಿಕ್ಷಕ ದೇವದಾಸ್ ಕೆರೆಮನೆ ಕಾರ್ಯಕ್ರಮವನ್ನು ನಿರೂಪಿಸಿದರು.