
ಪುತ್ತೂರು, ಫೆಬ್ರವರಿ. 28 – ದಕ್ಷಿಣ ಕನ್ನಡ ಜಿಲ್ಲೆಯ ದೈವಭಕ್ತಿಯಲ್ಲಿ ಮತ್ತೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅಡಿಕೆ ಕದಿಯಲು ಹೋದ ವ್ಯಕ್ತಿ ತೋಟದಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ಪುತ್ತೂರು ಪಾಂಗಳಾಯ ಎಂಬಲ್ಲಿ ನಡೆದಿದೆ.
ಸ್ಥಳೀಯರ ಪ್ರಕಾರ, ಮೃತ ವ್ಯಕ್ತಿ ತೋಟಕ್ಕೆ ಅಡಿಕೆ ಕದಿಯಲು ಬಂದಿದ್ದಾಗ ಮರ ಅರ್ಧದಲ್ಲೇ ಮುರಿದು ಬಿದ್ದು ಸಾವನ್ನಪ್ಪಿದ್ದಾನೆ. ಆದರೆ, ಈ ತೋಟ ಪಾಂಗಳಾಯ ಮೂಡಿತ್ತಾಯ ದೈವಸ್ಥಾನದ ಪರಿಸರದಲ್ಲಿ ಇರುವುದರಿಂದ, ಸ್ಥಳೀಯರು ಇದನ್ನು ದೈವದ ಕಾರಣಿಕ ಎಂದು ನಂಬುತ್ತಿದ್ದಾರೆ.
ಇಲ್ಲಿನ ಜನರು ದೈವಗಳ ಆಜ್ಞೆ ಇಲ್ಲದೆ ಯಾವುದನ್ನೂ ಮಾಡುವುದಿಲ್ಲ. ತಪ್ಪು ಮಾಡಿದವರಿಗೆ ದೈವವೇ ಶಿಕ್ಷೆ ವಿಧಿಸುತ್ತವೆ ಎನ್ನುವ ನಂಬಿಕೆ ಪ್ರಬಲವಾಗಿದೆ. ಈ ಹಿನ್ನೆಲೆಯಲ್ಲಿ, ಕಳ್ಳತನಕ್ಕೆ ಬಂದವನಿಗೆ ದೈವದ ಆಕ್ರೋಶವೇ ಈ ಅನಾಹುತಕ್ಕೆ ಕಾರಣವಾಗಿರಬಹುದು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.