
ಬೆಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತಲ ಅನುಮಾನಾಸ್ಪದ ಸಾವುಗಳ ಕುರಿತು ಎಸ್‌ಐಟಿ ರಚನೆಯಾಗಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ಈ ಪ್ರಕರಣದ ಹಿಂದೆ ದುರುದ್ದೇಶವಿದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
“ನನಗೆ ಒಂದು ಅನುಮಾನವಿದೆ. ಧರ್ಮಸ್ಥಳ ವಿಚಾರವಾಗಿ ಒಬ್ಬ ಮುಸ್ಲಿಂ ಹುಡುಗ ಪ್ರತಿದಿನ ಮಾಹಿತಿಗಳನ್ನು ಅಪ್‌ಲೋಡ್ ಮಾಡುತ್ತಿದ್ದಾನೆ. ಜೊತೆಗೆ, ಕೇರಳ ಸರ್ಕಾರ ಬಹಳ ಮುತುವರ್ಜಿಯಿಂದ ಧರ್ಮಸ್ಥಳ ವಿಚಾರದಲ್ಲಿ ತಲೆ ಹಾಕುತ್ತಿದೆ. ತಪ್ಪು ಮಾಡಿದರೆ ಅಂತಹ ವ್ಯಕ್ತಿಗಳ ಮೇಲೆ ಶಿಕ್ಷೆಯಾಗಲಿ, ಆದರೆ ಧರ್ಮಸ್ಥಳವನ್ನು ಗುರಿ ಮಾಡಬೇಡಿ” ಎಂದು ಅಶೋಕ್ ಹೇಳಿದ್ದಾರೆ.
ಧರ್ಮಸ್ಥಳ ಹಿಂದೂಗಳಿಗೆ ಪವಿತ್ರ ಸ್ಥಳವಾಗಿದ್ದು, ವರ್ಷಕ್ಕೆ ಕೋಟ್ಯಂತರ ಭಕ್ತರು ಬರುತ್ತಾರೆ ಎಂದು ಅಶೋಕ್ ನೆನಪಿಸಿದ್ದಾರೆ. “ಸೋಷಿಯಲ್ ಮೀಡಿಯಾದಲ್ಲಿ ನಿತ್ಯ ಅಪ್‌ಲೋಡ್ ಮಾಡುತ್ತಿರುವ ವ್ಯಕ್ತಿ ಮುಸ್ಲಿಂ. ಕೇರಳದ ಕಮ್ಯುನಿಸ್ಟ್ ಸರ್ಕಾರ ಈ ವಿಚಾರದಲ್ಲಿ ಮುತುವರ್ಜಿ ವಹಿಸುತ್ತಿದೆ. ಕರ್ನಾಟಕಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರದಲ್ಲಿ ಕೇರಳ ಸರ್ಕಾರ ಯಾಕೆ ಮಧ್ಯಪ್ರವೇಶ ಮಾಡಬೇಕು? ಅಯ್ಯಪ್ಪ ಸ್ವಾಮಿ ದೇಗುಲ ವಿಚಾರದಲ್ಲಿ ಕೇರಳ ಸರ್ಕಾರದ ನಡೆ ಹೇಗಿತ್ತು ಅಂತ ಎಲ್ಲರಿಗೂ ಗೊತ್ತಿದೆ. ಅವರ್ಯಾಕೆ ಈಗ ಕರ್ನಾಟಕ ವಿಚಾರಕ್ಕೆ ಮೂಗು ತೂರಿಸಬೇಕು?” ಎಂದು ಅವರು ಪ್ರಶ್ನೆ ಮಾಡಿದ್ದಾರೆ.
“ಬಹಳಷ್ಟು ಶವಗಳನ್ನು ಹೂತಿದ್ದಾರೆ ಎಂದರೆ ಅಷ್ಟೇ ಸಂಖ್ಯೆಯ ದೂರುಗಳೂ ದಾಖಲಾಗಬೇಕಿತ್ತಲ್ಲ? ಯಾಕೆ ದಾಖಲಾಗಿಲ್ಲ? ಇಂತಹ ಪ್ರಕರಣಗಳಲ್ಲಿ ಪೊಲೀಸರು ಸಾಮಾನ್ಯವಾಗಿ ಅಚಾತುರ್ಯ ಮಾಡುವುದಿಲ್ಲ. ಈಗ ಏಕಾಏಕಿ ಆ ನಿಗೂಢ ವ್ಯಕ್ತಿಗೆ ಜ್ಞಾನೋದಯ ಯಾಕಾಯ್ತು? ದುರುದ್ದೇಶದ ತನಿಖೆ ಮಾಡದೆ, ನಿಷ್ಪಪಕ್ಷಪಾತ ತನಿಖೆ ಮಾಡಲಿ ಎಸ್‌ಐಟಿ. ಧರ್ಮಸ್ಥಳ ಹೆಸರಿನ ಮೇಲೆ ಅಪಪ್ರಚಾರ ಮಾಡುವುದು ಸರಿಯಲ್ಲ” ಎಂದು ಅಶೋಕ್ ಒತ್ತಿ ಹೇಳಿದರು.
ತಪ್ಪು ಮಾಡಿರುವ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಿ, ಆದರೆ ಸಂಸ್ಥೆಯ ಹೆಸರಿಗೆ ಅಪಪ್ರಚಾರ ಮಾಡಬೇಡಿ. ಎಸ್‌ಐಟಿ ತಂಡಕ್ಕೆ ಬೇರೆ ಯಾವುದೇ ಹೊಣೆ ಕೊಡದೆ, ಈ ತನಿಖೆಯಲ್ಲೇ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿ ಎಂದು ಆರ್. ಅಶೋಕ್ ಮಾಧ್ಯಮಗಳಿಗೆ ತಿಳಿಸಿದರು.