
ಹೆಬ್ರಿ : ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಡೆದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ದೊರಕಿದೆ. ಪ್ರಕರಣದಲ್ಲಿ ಅಮಾನತುಗೊಂಡಿದ್ದ ಸಿಬ್ಬಂದಿಯೊಬ್ಬರು ಇದೀಗ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಆಡಳಿತ ಮಂಡಳಿಯ ವಿರುದ್ಧವೇ ‘ದಲಿತ ದೌರ್ಜನ್ಯ’ ದೂರು ದಾಖಲಿಸಿದ್ದಾರೆ.
ಶಿವಪುರ ಗ್ರಾಮದ ಶಂಕರ ನಾಯ್ಕ ಎಂಬವರು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ತಿಂಗಳ ಹಿಂದೆ, ಸಂಘದ ₹88,000 ಹಣ ದುರುಪಯೋಗ ಮಾಡಿದ ಆರೋಪದ ಮೇಲೆ ಅವರನ್ನು ಆಡಳಿತ ಮಂಡಳಿಯ ನಿರ್ಣಯದಂತೆ ಅಮಾನತುಗೊಳಿಸಲಾಗಿತ್ತು. ಬಳಿಕ ಮಾನವೀಯ ನೆಲೆಯಲ್ಲಿ, ದುರುಪಯೋಗವಾದ ₹88,000ದಲ್ಲಿ ₹60,000 ಹಣವನ್ನು ಮನ್ನಾ ಮಾಡಿ, ಉಳಿದ ₹28,000 ಹಣವನ್ನು ಪಾವತಿಸುವಂತೆ ಸಂಘದ ಆಡಳಿತ ಮಂಡಳಿ ನಿರ್ಣಯಿಸಿತ್ತು.
ಆದರೆ, ಶಂಕರ ನಾಯ್ಕ ಅವರು ಸಂಘದ ಈ ನಿರ್ಣಯಕ್ಕೆ ಒಪ್ಪದೆ, ಹಣ ಪಾವತಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಜೂನ್ 13ರಂದು ಮತ್ತೆ ಅಮಾನತು ಮಾಡಲಾಗಿತ್ತು. ಅಮಾನತುಗೊಂಡ ಶಂಕರ ನಾಯ್ಕ ಅವರ ವೇತನದಿಂದ ತಿಂಗಳಿಗೆ ₹5,000 ಹಣವನ್ನು ಸಂಘದ ಖಾತೆಗೆ ಜಮಾ ಮಾಡುವ ನಿರ್ಧಾರಕ್ಕೂ ಶಂಕರ ನಾಯ್ಕ ಒಪ್ಪದೇ, ಸಂಘದ ವಿರುದ್ಧವೇ ಸುಳ್ಳು ದೂರು ನೀಡಲು ಮುಂದಾಗಿದ್ದಾರೆ ಎಂದು ಸಂಘದ ಆಡಳಿತ ಮಂಡಳಿ ಆರೋಪಿಸಿದೆ.
ಆದರೆ, ಅಮಾನತುಗೊಂಡಿರುವ ಶಂಕರ ನಾಯ್ಕ ಅವರು, ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಶೀನ ನಾಯ್ಕ, ಅಧ್ಯಕ್ಷ ನವೀನ್ ಅಡ್ಯಂತಾಯ, ಸಂಘದ 12 ನಿರ್ದೇಶಕರು ಹಾಗೂ ನಾಷ್ಪಾಲು ಗ್ರಾಮದ ಕಾಸನಮಕ್ಕಿಯ ಸುಂದರ ಎಂಬವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ತಾನು ಪರಿಶಿಷ್ಟ ಪಂಗಡಕ್ಕೆ ಸೇರಿದವನು ಎಂದು ಗೊತ್ತಿದ್ದೂ, ಉದ್ದೇಶಪೂರ್ವಕವಾಗಿ ಸಂಬಳ ನೀಡದೆ ಕೆಲಸದಿಂದ ಅಮಾನತುಗೊಳಿಸಿದ್ದಾರೆ. ಆರ್ಥಿಕ ಬಹಿಷ್ಕಾರ ಹಾಕಿ, ಮಾನಸಿಕ ಕಿರುಕುಳ, ದ್ವೇಷಪೂರಿತ ಸುಳ್ಳು ಮೊಕದ್ದಮೆ ಹಾಗೂ ಕಾನೂನು ವ್ಯವಹಾರದ ಮೂಲಕ ಮಾನಸಿಕ ಹಿಂಸೆ ನೀಡಿ ದಲಿತ ದೌರ್ಜನ್ಯ ಎಸಗಿದ್ದಾರೆ,” ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ‘ದಲಿತ ದೌರ್ಜನ್ಯ’ ಪ್ರಕರಣ ದಾಖಲಾಗಿದೆ.