
ಕಲಬುರಗಿ : ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಪತ್ನಿಯ ಅನೈತಿಕ ಸಂಬಂಧದ ಶಂಕೆಯಿಂದ ಕೋಪಗೊಂಡ ಪತಿಯೊಬ್ಬನು, ಪತ್ನಿ ಹಾಗೂ ಆಕೆಯ ಪ್ರೇಮಿಯನ್ನು ಭೀಕರವಾಗಿ ಕೊಲೆ ಮಾಡಿ, ನಂತರ ತಾನೇ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ನಡೆದಿದೆ.
ಮೃತರನ್ನು ಪತ್ನಿ ಸೃಷ್ಟಿ (22) ಮತ್ತು ಯುವಕ ಕಾಜಪ್ಪ (22) ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ ಶ್ರೀಮಂತ್ ಎಂಬವರು ಎರಡು ವರ್ಷಗಳ ಹಿಂದೆ ಸೃಷ್ಟಿಯನ್ನು ವಿವಾಹವಾಗಿದ್ದರು. ಇತ್ತೀಚೆಗೆ ಪತ್ನಿ ಹಾಗೂ ಕಾಜಪ್ಪ ನಡುವೆ ಸಂಬಂಧವಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಮನೆಯಲ್ಲಿ ಜಗಳವಾಗುತ್ತಿದ್ದ ಎನ್ನಲಾಗಿದೆ.
ಕುಟುಂಬದ ಗೌರವ ಮತ್ತು ಮಾನಕ್ಕಾಗಿ ಈ ಕೃತ್ಯ ಎಸಗಿದ್ದಾಗಿ ಶ್ರೀಮಂತ್ ಪೊಲೀಸರು ಎದುರು ತಾನೇ ಒಪ್ಪಿಕೊಂಡಿದ್ದು, ಘಟನೆಯ ನಂತರ ಆತ ನೇರವಾಗಿ ಆಳಂದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸಲಾಗುತ್ತಿದೆ.