
ಬೆಂಗಳೂರು: ಕಾಂಗ್ರೆಸ್‌ನ “ಒನ್ ಟು ಒನ್” ಸಭೆಗಳು ಆಡಳಿತದ ಕಾರ್ಯವೈಖರಿ ಮತ್ತು ಸಚಿವರ ವರ್ತನೆಗಳ ಬಗ್ಗೆ ಅಸಮಾಧಾನ ಹೊರಹಾಕುವ ವೇದಿಕೆಯಾಗಿದ್ದರೆ, ಬುಧವಾರ ಈ ಸಭೆ ಶಾಸಕರ ವಿರುದ್ಧವೇ ಅವರ ಕುಟುಂಬದ ಸದಸ್ಯರು ದೂರು ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು.
ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿದ್ದ ಮ್ಯಾರಥಾನ್ “ಒನ್ ಟು ಒನ್” ಸಭೆಗಳ ನಡುವೆ, ಶಾಸಕ ಸಿ.ಪಿ. ಯೋಗೇಶ್ವರ ಅವರ ವಿಚ್ಛೇದಿತ ಪತ್ನಿ ಮಾಳವಿಕಾ ಸೋಳಂಕಿ ಮತ್ತು ಪುತ್ರಿ ನಿಶಾ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ದೂರು ನೀಡಿದರು.
“ನಮ್ಮ ಪಾಡಿಗೆ ನಾವಿದ್ದರೂ ನಮ್ಮ ಮೇಲೆ ಕೇಸುಗಳನ್ನು ಹಾಕಿಸಿ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನಮ್ಮ ಮೇಲೆ ಯಾಕಿಷ್ಟು ದ್ವೇಷ ಎಂದು ಗೊತ್ತಾಗುತ್ತಿಲ್ಲ. ದಯವಿಟ್ಟು ಇದರಿಂದ ಮುಕ್ತಿ ಕಲ್ಪಿಸಬೇಕು” ಎಂದು ಅವರು ಸುರ್ಜೇವಾಲ ಅವರಿಗೆ ಮನವಿ ಮಾಡಿದರು. ಇದರ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಸುರ್ಜೇವಾಲ ಭರವಸೆ ನೀಡಿದ್ದಾರೆ ಎಂದು ಯೋಗೇಶ್ವರ ಪುತ್ರಿ ನಿಶಾ ಸ್ವತಃ ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿಶಾ ಮತ್ತು ಮಾಳವಿಕಾ, “ಯೋಗೇಶ್ವರ್ ನಮ್ಮನ್ನು ಬೀದಿಗೆ ತಳ್ಳಿದ್ದಾರೆ. ನಮ್ಮ ಭವಿಷ್ಯ ಕತ್ತಲಿನಲ್ಲಿದೆ. ವಿಚ್ಛೇದನದ ನಂತರ ನಮ್ಮ ಪಾಡಿಗೆ ನಾವಿದ್ದೆವು. ಆದರೂ ನಮ್ಮ ಮೇಲೆ ಕೇಸು ಹಾಕಿಸಿದರು. ಅವರಿಗೆ ನಮ್ಮ ಮೇಲೆ ಯಾಕಿಷ್ಟು ದ್ವೇಷ ಎಂದು ಗೊತ್ತಾಗುತ್ತಿಲ್ಲ. ಇದೆಲ್ಲದರಿಂದ ಬೇಸತ್ತು ಸುರ್ಜೇವಾಲ ಅವರನ್ನು ಭೇಟಿ ಮಾಡಿದೆವು. ಸಿಎಂ-ಡಿಸಿಎಂ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಹೇಳಿದರು.