
ಮಂಗಳೂರು: ನಗರದ ಹೊರವಲಯದ ಸುರತ್ಕಲ್‌ನಲ್ಲಿ ನಡೆದ ಭೀಕರ ಚೂರಿ ಇರಿತ ಮತ್ತು ಕೊಲೆ ಯತ್ನ ಪ್ರಕರಣದ ಮುಖ್ಯ ಆರೋಪಿ, ಕುಖ್ಯಾತ ರೌಡಿಶೀಟರ್ ಗುರುರಾಜ್ ಆಚಾರಿಯನ್ನು ಸುರತ್ಕಲ್ ಠಾಣಾ ಪೊಲೀಸರು ಶನಿವಾರದಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷುಲ್ಲಕ ವೈಮನಸ್ಸಿನ ಕಾರಣಕ್ಕೆ ಇಬ್ಬರು ಯುವಕರ ಮೇಲೆ ಮಾರಣಾಂತಿಕವಾಗಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದ ಈ ತಂಡದ ಪ್ರಮುಖ ಸೂತ್ರಧಾರ ಈತ.
ಅಕ್ಟೋಬರ್ 23 ರ ಗುರುವಾರ ರಾತ್ರಿ, ಹಸನ್ ಮುಕ್ಷಿತ್ ಮತ್ತು ನಿಝಾಮ್ ಎಂಬ ಯುವಕರ ಮೇಲೆ ಗುರುರಾಜ್ ಆಚಾರಿ, ಅಲೆಕ್ಸ್ ಸಂತೋಷ್, ನಿತಿನ್ ಮತ್ತು ಸುಶಾಂತ್ ಸೇರಿ ಮತ್ತಿತರರು ಸೇರಿಕೊಂಡು ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದರು. ಈ ಪೈಕಿ ಗುರುರಾಜ್ ಆಚಾರಿ ಹಿಂದೆ ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಘಟನೆ ನಡೆದ ಕೂಡಲೇ ಪೊಲೀಸರು ಕೊಲೆ ಯತ್ನದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುರತ್ಕಲ್ ಕಟ್ಲದ ನಿವಾಸಿಗಳಾದ ಸುಶಾಂತ್ ಅಲಿಯಾಸ್ ಕಡವಿ, ಕೆ.ವಿ. ಅಲೆಕ್ಸ್, ಇಂದಿರಾ ಕಟ್ಟೆ ನಿವಾಸಿ ನಿತಿನ್ (26) ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ ಕುಳಾಯಿ ಹೊನ್ನಕಟ್ಟೆಯ ಅರುಣ್ ಶೆಟ್ಟಿ ಎಂಬುವವರನ್ನು ಪೊಲೀಸರು ಈಗಾಗಲೇ ಶುಕ್ರವಾರದಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆಯ ನಂತರ ಪ್ರಮುಖ ಆರೋಪಿ ಗುರುರಾಜ್ ಆಚಾರಿ ಮತ್ತು ಆತನ ಸಹಚರ ಅಶೋಕ್ ತಲೆಮರೆಸಿಕೊಂಡಿದ್ದರು. ಇವರ ಶೋಧಕ್ಕಾಗಿ ಸುರತ್ಕಲ್ ಪೊಲೀಸರು ವಿಶೇಷ ಕಾರ್ಯಚರಣೆಯನ್ನು ತೀವ್ರಗೊಳಿಸಿದ್ದು, ಅದರ ಫಲವಾಗಿ ರೌಡಿಶೀಟರ್ ಗುರುರಾಜ್ ಆಚಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಇನ್ನೂ ತಲೆಮರೆಸಿಕೊಂಡಿರುವ ಅಶೋಕ್‌ನ ಬಂಧನಕ್ಕಾಗಿ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಾನೂನು ಸುವ್ಯವಸ್ಥೆಯನ್ನು ಕದಡುವ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.



































