
ಕಾರ್ಕಳ : ರಾಜ್ಯದ ಗಮನ ಸೆಳೆದಿರುವ ಕಾರ್ಕಳದ ಪರಶುರಾಮ ನಕಲಿ ಪ್ರತಿಮೆ ಹಗರಣ ಮತ್ತು ಹಗರಣದ ರೂವಾರಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ವಿರುದ್ದ ಕಾರ್ಕಳ ಕಾಂಗ್ರೆಸ್ ಪಕ್ಷವು ಸತತವಾಗಿ ಎರಡು ವರ್ಷಗಳಿಂದ ಹೋರಾಟ ಸಂಘಟಿಸುತ್ತಾ ಬಂದಿದೆ, ಮತ್ತು ಈ ಹೋರಾಟಕ್ಕೆ ಕೆಪಿಸಿಸಿ ಸಮಿತಿಯು ಪೂರ್ಣ ಬೆಂಬಲವನ್ನು ಘೋಷಿಸಿದ್ದು ಬೆಂಗಳೂರಿನ ಪ್ರೀಡಮ್ ಪಾರ್ಕ್ ಮೈದಾನದಲ್ಲಿ ಕೆಪಿಸಿಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಪಕ್ಷದ ಹೋರಾಟದ ಫಲವಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಗರಣದ ಕುರಿತು ವಿಧಾನಸಭಾ ಕಲಾಪದ ಸಂದರ್ಭದಲ್ಲಿಯೂ ಪ್ರಸ್ತಾಪ ಮಾಡಿದ್ದರು.
ಸುನೀಲ್ ಕುಮಾರ್ ಅವರ ನಕಲಿ ಪ್ರತಿಮೆಯ ವಿರುದ್ದದ ಕಾಂಗ್ರೆಸ್ ಪಕ್ಷದ ಹೋರಾಟದಲ್ಲಿ ಕಾನೂನು ಪ್ರಕ್ರಿಯೆಯ ಜವಾಬ್ದಾರಿ ವಹಿಸಿದ್ದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ಅವರು ಇತ್ತೀಚೆಗೆ ಪರಶುರಾಮ ಹಗರಣದ ವಿಚಾರವಾಗಿ ನಮ್ಮ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರ ವಿರುದ್ದ ಬಹಿರಂಗ ಹೇಳಿಕೆ ನೀಡಿರುವುದು ಪಕ್ಷ ವಿರೋದಿ ಚಟುವಟಿಕೆಯಾಗಿದೆ.
ಜನವರಿಯಲ್ಲಿ ನಡೆದ ಕಾರ್ಕಳ ಕಾಂಗ್ರೆಸ್ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರು ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಭಾಷಣವನ್ನು ಆಕ್ಷೇಪಿಸಿ ಕೃಷ್ಣ ಶೆಟ್ಟಿ ಬಜಗೋಳಿಯವರು ಮಾಧ್ಯಮದಲ್ಲಿ ಹೇಳಿಕೆಯನ್ನು ನೀಡಿರುವುದು ಕ್ಷಮೆಗೆ ಅರ್ಹವಲ್ಲ. ಮಾಜಿ ಸಚಿವರು ಕರಾವಳಿಯ ಹಿರಿಯ ಕಾಂಗ್ರೆಸ್ ನಾಯಕರಾದ ವಿನಯಕುಮಾರ್ ಸೊರಕೆಯವರ ವಿರುದ್ದ ಮತ್ತು ಬೈಂದೂರಿನ ಮಾಜಿ ಶಾಸಕರು, ಹಿರಿಯರಾದ ಗೋಪಾಲ ಪೂಜಾರಿಯವರ ವಿರುದ್ದವು ಬೇರೆ ಬೇರೆ ಸಂದರ್ಭಗಳಲ್ಲಿ ಕಾರ್ಯಕರ್ತರ ನಡುವೆ ಅಪನಂಬಿಕೆ ಬರುವಂತೆ ಅಪಪ್ರಚಾರವನ್ನು ನಡೆಸುತ್ತಿದ್ದಾರೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಅವರ ಪಕ್ಷ ವಿರೋದಿ ಚಟುವಟಿಕೆಗಳು ಕಾಂಗ್ರೆಸ್ ಪಕ್ಷದ ಸಂಘಟನೆಗೆ ತೀವ್ರ ಹಿನ್ನಡೆಯನ್ನು ಉಂಟುಮಾಡುತ್ತಿದೆ.
ಸಜ್ಜನ ರಾಜಕಾರಣಿ, ಶಿಕ್ಷಣ ತಜ್ಞ ಕೆಪಿಸಿಸಿಯ ಕಾರ್ಯಾಧ್ಯಕ್ಷರಾಗಿರುವ ವಿಧಾನಪರಿಷತ್ ಸದಸ್ಯರಾದ ಮಾನ್ಯ ಮಂಜುನಾಥ ಭಂಡಾರಿಯವರ ಹೆಸರನ್ನು ಕೃಷ್ಣ ಶೆಟ್ಟಿ ಬಜಗೋಳಿಯವರು ದುರುಪಯೋಗ ಪಡಿಸಿಕೊಂಡು ಮಾನ್ಯ ಮಂಜುನಾಥ ಭಂಡಾರಿಯವರ ಹೆಸರಿಗೆ ಕಳಂಕ ತರುವ ಕೆಲಸವನ್ನು ನಡೆಸುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ಕರಾವಳಿಯ ಉಭಯ ಜಿಲ್ಲೆಗಳ ಕಾಂಗ್ರೆಸ್ ನಾಯಕರ ವಿರುದ್ಧ ನಿರಂತರ ಅಪಪ್ರಚಾರ ನಡೆಸುತ್ತಾ ಪಕ್ಷ ವಿರೋದಿ ಚಟುವಟಿಕೆ ನಡೆಸುತ್ತಿರುವ ಕೃಷ್ಣ ಶೆಟ್ಟಿ ಬಜಗೋಳಿ ಅವರನ್ನು ತಕ್ಷಣ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಬೇಕಾಗಿ ಪಕ್ಷದ ನಾಯಕರಲ್ಲಿ ವಿಂತಿಸುತ್ತೇನೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೂರಜ್ ಶೆಟ್ಟಿ ನಕ್ರೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.