
ಹೊಸದಿಲ್ಲಿ: ದೆಹಲಿ-ಎನ್‌ಸಿಆರ್‌ನ ಬೀದಿ ನಾಯಿಗಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ಆಗಸ್ಟ್ 8ರ ತೀರ್ಪಿನಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿ ಹೊಸ ಆದೇಶವನ್ನು ಹೊರಡಿಸಿದೆ. ಈ ಹೊಸ ತೀರ್ಪಿನ ಪ್ರಕಾರ, ಲಸಿಕೆ ಮತ್ತು ಜಂತುಹುಳು ನಿವಾರಣಾ ಚಿಕಿತ್ಸೆ ನೀಡಿದ ನಂತರ ಬೀದಿ ನಾಯಿಗಳನ್ನು ಅವುಗಳ ಮೂಲ ಪ್ರದೇಶಗಳಿಗೇ ಬಿಡುಗಡೆ ಮಾಡಲು ಅನುಮತಿ ನೀಡಲಾಗಿದೆ. ಈ ತೀರ್ಪು ಪ್ರಾಣಿ ಹಕ್ಕುಗಳ ಪರ ಇರುವವರಲ್ಲಿ ಸಂತಸ ತಂದಿದೆ.
ಆದರೆ, ರೇಬೀಸ್‌ನಿಂದ ಬಳಲುತ್ತಿರುವ ಅಥವಾ ಆಕ್ರಮಣಕಾರಿ ವರ್ತನೆ ತೋರುವ ನಾಯಿಗಳಿಗೆ ಪ್ರತ್ಯೇಕವಾಗಿ ಲಸಿಕೆ ನೀಡಿ, ಸೂಕ್ತ ಆಶ್ರಯ ತಾಣಗಳಲ್ಲಿ ಇರಿಸಬೇಕೆಂದು ನ್ಯಾಯಾಲಯವು ನಿರ್ದೇಶಿಸಿದೆ.
ಈ ವಿಷಯದ ವ್ಯಾಪ್ತಿಯನ್ನು ದೆಹಲಿ-ಎನ್‌ಸಿಆರ್‌ಗೆ ಮಾತ್ರ ಸೀಮಿತಗೊಳಿಸದೆ, ಭಾರತದಾದ್ಯಂತ ವಿಸ್ತರಿಸಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ‘ಬೀದಿ ನಾಯಿಗಳನ್ನು ಅವುಗಳ ಪ್ರದೇಶಗಳಿಂದ ಬೇರ್ಪಡಿಸುವ ನಿಷೇಧವನ್ನು ತಡೆಹಿಡಿಯಲಾಗಿದೆ. ಅವುಗಳಿಗೆ ಜಂತುಹುಳು ನಿವಾರಣೆ ಮತ್ತು ಲಸಿಕೆ ನೀಡಿ ಅವುಗಳನ್ನು ಅದೇ ಪ್ರದೇಶಕ್ಕೆ ಹಿಂತಿರುಗಿಸಬೇಕು’ ಎಂದು ಮೂವರು ನ್ಯಾಯಾಧೀಶರ ಪೀಠವು ನಿರ್ದೇಶಿಸಿದೆ. ಈ ಪ್ರಕರಣದ ಎಲ್ಲ ವಿವರಗಳನ್ನು ಪರಿಶೀಲಿಸಿದ ನಂತರ ರಾಷ್ಟ್ರೀಯ ಮಟ್ಟದ ನೀತಿಯೊಂದನ್ನು ರೂಪಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಈ ನಿರ್ಣಯ ಕೈಗೊಂಡಿದೆ. ಆಗಸ್ಟ್ 8ರಂದು ನ್ಯಾಯಮೂರ್ತಿ ಪಾರ್ದಿವಾಲಾ ನೇತೃತ್ವದ ಪೀಠವು ನೀಡಿದ್ದ ಆದೇಶವು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಆದೇಶದಲ್ಲಿ ಎಂಟು ವಾರಗಳೊಳಗೆ ದೆಹಲಿ-ಎನ್‌ಸಿಆರ್‌ನ ಎಲ್ಲಾ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಲ್ಲಿ ಇರಿಸುವಂತೆ ನಾಗರಿಕ ಸಂಸ್ಥೆಗಳಿಗೆ ನಿರ್ದೇಶಿಸಲಾಗಿತ್ತು. ಈ ಆದೇಶದ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾದ ನಂತರ, ಅಪರೂಪದ ಕ್ರಮದಲ್ಲಿ, ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವನ್ನು ಮೂವರು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿದ್ದರು.
ಈ ತೀರ್ಪಿನ ಜೊತೆಗೆ ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿದೆ. ‘ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಬಾರದು. ಅದಕ್ಕೆಂದೇ ಪ್ರತ್ಯೇಕ ಜಾಗವನ್ನು ನಿರ್ಮಿಸಬೇಕು. ಯಾರಾದರೂ ಬೀದಿಗಳಲ್ಲಿ ನಾಯಿಗಳಿಗೆ ಆಹಾರ ನೀಡುತ್ತಿರುವುದು ಕಂಡುಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಪ್ರಾಣಿ ಪ್ರಿಯರಿಗೆ ನಾಯಿಗಳನ್ನು ದತ್ತು ತೆಗೆದುಕೊಳ್ಳಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದರೂ, ಬೀದಿ ನಾಯಿಗಳನ್ನು ದತ್ತು ಪಡೆದ ನಂತರ ಅವು ಮತ್ತೆ ಬೀದಿಗಳಿಗೆ ಹಿಂತಿರುಗದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ ಎಂದು ಪೀಠ ಒತ್ತಿ ಹೇಳಿದೆ.
ಅಲ್ಲದೆ, ಈ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ಅರ್ಜಿದಾರರು 25,000 ರೂ. ಮತ್ತು ಸರ್ಕಾರೇತರ ಸಂಸ್ಥೆಗಳು 2 ಲಕ್ಷ ರೂ. ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಈ ಮೊತ್ತವನ್ನು ರಾಷ್ಟ್ರೀಯ ನೀತಿ ರೂಪಿಸುವ ಕಾರ್ಯಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಕೊನೆಯಲ್ಲಿ, ಈ ವಿಷಯದ ಕುರಿತು ರಾಷ್ಟ್ರೀಯ ನೀತಿಯನ್ನು ರೂಪಿಸಲು ಇತರ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಇದೇ ರೀತಿಯ ಅರ್ಜಿಗಳನ್ನು ತಾನೇ ವರ್ಗಾಯಿಸಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.