
ಮಂಗಳೂರು: ‘ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ’ ಎಂದು ಹೇಳಿಕೆ ನೀಡಿ ದೇಶಾದ್ಯಂತ ಸುದ್ದಿಯಾಗಿದ್ದ ‘ಮಾಸ್ಕ್ ಮ್ಯಾನ್’ ಚಿನ್ನಯ್ಯ ಸೇರಿದಂತೆ ಕೆಲವರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಈ ಪ್ರಕರಣದ ಬಗ್ಗೆ ತನಿಖೆಗೆ ಒತ್ತಾಯಿಸಿ ಇವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿ ಚಿನ್ನಯ್ಯನಿಗೆ ಛೀಮಾರಿ ಹಾಕಿತ್ತು. ಈ ಮಾಹಿತಿಯನ್ನು ರಾಜ್ಯ ಸರ್ಕಾರದಿಂದ ಮುಚ್ಚಿಟ್ಟು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಈಗ ಬೆಳಕಿಗೆ ಬಂದಿದೆ.
ಸುಪ್ರೀಂ ಕೋರ್ಟ್ ತಪರಾಕಿ:
ಚಿನ್ನಯ್ಯ ಸಲ್ಲಿಸಿದ್ದ ಅರ್ಜಿಯನ್ನು ಮೇ 5ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ, ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಹೇಳಿದೆ. “ಇದು ‘ಪೈಸಾ ಇಂಟ್ರೆಸ್ಟ್ ಲಿಟಿಗೇಷನ್’, ‘ಪಬ್ಲಿಸಿಟಿ ಇಂಟ್ರೆಸ್ಟ್ ಲಿಟಿಗೇಷನ್’, ಮತ್ತು ‘ಪೊಲಿಟಿಕಲ್ ಇಂಟ್ರೆಸ್ಟ್ ಲಿಟಿಗೇಷನ್’ ಹೊರತು ಪಿಐಎಲ್ ಅಲ್ಲ” ಎಂದು ಸ್ಪಷ್ಟವಾಗಿ ಹೇಳಿ ಅರ್ಜಿಯನ್ನು ವಜಾ ಮಾಡಿತ್ತು. ಅಲ್ಲದೆ, ಇಷ್ಟು ವರ್ಷಗಳ ನಂತರ ದೂರು ನೀಡಿದ್ದಕ್ಕೂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ರಾಜ್ಯ ಸರ್ಕಾರಕ್ಕೆ ಮೋಸ:
ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದ್ದರೂ, ಈ ನಿರ್ಣಾಯಕ ಮಾಹಿತಿಯನ್ನು ‘ಬುರುಡೆ ಗ್ಯಾಂಗ್’ ಎಂದು ಕರೆಯಲಾಗುತ್ತಿರುವ ಈ ತಂಡ ರಾಜ್ಯ ಸರ್ಕಾರದ ಮುಂದೆ ಬಹಿರಂಗಪಡಿಸಲಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಮುಚ್ಚಿಟ್ಟು, ಅದೇ ವಿಷಯದ ಮರು ತನಿಖೆಗಾಗಿ ಎಸ್‌ಐಟಿ ರಚಿಸುವಂತೆ ಒತ್ತಾಯಿಸಿದ್ದರು. ಚಿನ್ನಯ್ಯನ ದೂರಿನಲ್ಲಿ ಸತ್ಯವಿರಬಹುದು ಎಂದು ನಂಬಿದ ರಾಜ್ಯ ಸರ್ಕಾರವು, ಈ ನಿರ್ಣಾಯಕ ಮಾಹಿತಿಯ ಕೊರತೆಯಿಂದಾಗಿ ಎಸ್‌ಐಟಿ ರಚಿಸಲು ಒಪ್ಪಿಗೆ ನೀಡಿತ್ತು ಎಂದು ಹೇಳಲಾಗಿದೆ.
ಅರ್ಜಿದಾರರು ಬೆಳ್ತಂಗಡಿ ನ್ಯಾಯಾಲಯದಲ್ಲೂ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಬಾಯ್ಬಿಡದೆ ದೂರು ದಾಖಲಿಸಿದ್ದು, ಈ ಮೂಲಕ ಬೆಳ್ತಂಗಡಿ ಕೋರ್ಟ್‌ಗೂ ವಂಚನೆ ಮಾಡಿದ್ದಾರೆ ಎಂದು ವರದಿಯಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿಯೇ ಯಾವುದೇ ಹುರುಳಿಲ್ಲ ಎಂದು ತೀರ್ಮಾನಿಸಿದ ಪ್ರಕರಣದಲ್ಲಿಯೂ, ಈ ತಂಡವು ಈ ರೀತಿ ವರ್ತಿಸಿರುವುದು ತನಿಖಾ ಸಂಸ್ಥೆಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.



































