
ಫ್ಲೋರಿಡಾ (ಅಮೆರಿಕ): ಸುಮಾರು 9 ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ISS)ದಲ್ಲಿ ಕಳೆದ ಬಳಿಕ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಸ್ಕೋರ್ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ಬುಧವಾರ (ಮಾ.19) ಬೆಳಗಿನ ಜಾವ 3.27ರ ಸುಮಾರಿಗೆ ಸ್ಪೇಸ್ ಎಕ್ಸ್‌ನ ಕ್ರೂ ಡ್ರಾಗನ್ ನೌಕೆಯು ಪ್ಯಾರಚೂಟ್ ಮೂಲಕ ಅಮೆರಿಕದ ಫ್ಲೋರಿಡಾದ ಸಮುದ್ರದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಯಿತು. ಬಳಿಕ ನಾಸಾ ತಂಡವು ಗಗನಯಾತ್ರಿಗಳನ್ನು ಸಮುದ್ರದಿಂದ ಮೇಲಕ್ಕೆತ್ತಿ, ಆರೋಗ್ಯ ಪರೀಕ್ಷೆಗೆ ಕರೆದೊಯ್ಯಲಾಯಿತು.
9 ತಿಂಗಳ ಸಮಯದಲ್ಲಿ 286 ದಿನಗಳ ಕಾಲ ISS ನಲ್ಲಿ ಉಳಿದುಕೊಂಡಿದ್ದರು.4,577 ಬಾರಿ ಭೂಮಿಗೆ ಸುತ್ತು ಕೊಟ್ಟಿದ್ದರು. ಒಟ್ಟು 195.2 ಮಿಲಿಯನ್ ಕಿಮೀ ದೂರ ಹಾರಾಟ ಮಾಡಿದ್ದರು.
ಅಪರೂಪದ ಸನ್ನಿವೇಶ:
2023ರ ಜೂನ್ 5ರಂದು ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ ಸುನೀತಾ ಹಾಗೂ ಬುಚ್ ವಿಸ್ಕೋರ್ ನೌಕೆಯಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ISSನಲ್ಲೇ ಉಳಿಯಬೇಕಾದ ಪರಿಸ್ಥಿತಿ ಎದುರಿಸಿದ್ದರು. ತಾಂತ್ರಿಕ ಸಮಸ್ಯೆ ನಿವಾರಣೆಯಾಗುವವರೆಗೂ ಅವರು ಬಾಹ್ಯಾಕಾಶದಲ್ಲಿ ಮುಂದುವರಿಯಬೇಕಾಯಿತು.
ನಾಸಾದ ಧನ್ಯವಾದ:
“ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದು, ಗಗನಯಾತ್ರಿಗಳು ಸುರಕ್ಷಿತವಾಗಿದ್ದಾರೆ” ಎಂದು ನಾಸಾ ಅಧಿಕೃತ ಹೇಳಿಕೆ ನೀಡಿದ್ದು, ಸ್ಪೇಸ್ ಎಕ್ಸ್ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸಿದೆ.
ಗುಜರಾತ್‌ನಲ್ಲಿ ಸಂಭ್ರಮ:
ಸುನೀತಾ ವಿಲಿಯಮ್ಸ್ ಅವರ ಪೂರ್ವಿಕರ ಮನೆ ಇರುವ ಗುಜರಾತ್‌ನ ಜುಲಾಸಾನ್ ಗ್ರಾಮದಲ್ಲಿ ಜನರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.