
ತಿರುಪ್ಪುರ್ : ಟಾಟಾ ಹ್ಯಾರಿಯರ್ ಇವಿ ಕಾರಿನ ʼಸಮ್ಮನ್ ಮೋಡ್ʼನಲ್ಲಿನ ದೋಷದಿಂದಾಗಿ ಅದರ ಮಾಲೀಕ ದಾರುಣವಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಪ್ಪುರ್‌ನಲ್ಲಿ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿವೆ.
ಘಟನೆ ನಡೆದಿದ್ದು ಹೇಗೆ?
ಆಗಸ್ಟ್ 14ರಂದು ತಿರುಪ್ಪುರ್‌ನ ಅವಿನಾಶಿಯಲ್ಲಿ ಈ ದುರಂತ ನಡೆದಿದ್ದು, ಮೃತಪಟ್ಟವರನ್ನು ಬನಿಯನ್ ಅಂಗಡಿ ನಡೆಸುತ್ತಿದ್ದ ಸೆಂಥಿಲ್ ಎಂದು ಗುರುತಿಸಲಾಗಿದೆ. ಸೆಂಥಿಲ್ ಅವರು ಇತ್ತೀಚೆಗಷ್ಟೇ ಈ ಹೊಸ ಟಾಟಾ ಹ್ಯಾರಿಯರ್ ಇವಿ ಕಾರನ್ನು ಖರೀದಿಸಿದ್ದರು. ವರದಿಯ ಪ್ರಕಾರ, ಕಾರನ್ನು ಇಳಿಜಾರಿನಲ್ಲಿ ಹ್ಯಾಂಡ್‌ಬ್ರೇಕ್ ಹಾಕದೆ ನಿಲ್ಲಿಸಲಾಗಿತ್ತು ಮತ್ತು ಅದು ‘ಸಮ್ಮನ್ ಮೋಡ್’ನಲ್ಲಿತ್ತು. ಕಾರಿನ ಬಾಗಿಲು ತೆರೆದಿರುವಾಗಲೇ ಅದು ಇದ್ದಕ್ಕಿದ್ದಂತೆ ಹಿಂದಕ್ಕೆ ಚಲಿಸಲು ಪ್ರಾರಂಭಿಸಿದೆ. ಇದನ್ನು ಗಮನಿಸಿದ ಸೆಂಥಿಲ್ ಕಾರನ್ನು ಏರಲು ಪ್ರಯತ್ನಿಸಿದ್ದಾರೆ, ಆದರೆ ಸಾಧ್ಯವಾಗದೇ ಬಿದ್ದು ಕಾರು ಅವರ ಮೇಲಿಂದ ಹರಿದಿದೆ.
ಟಾಟಾ ಮೋಟಾರ್ಸ್ ಪ್ರತಿಕ್ರಿಯೆ
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಟಾಟಾ ಮೋಟಾರ್ಸ್, “ಈ ದುರಂತದ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದ್ದು, ಮೃತರ ಕುಟುಂಬಕ್ಕೆ ತೀವ್ರ ದುಃಖವಾಗಿದೆ. ನಮ್ಮ ಸಂಪೂರ್ಣ ಬೆಂಬಲ ಮತ್ತು ಸಂತಾಪ ಅವರ ಜೊತೆಗಿದೆ. ನಾವು ಸದ್ಯ ಎಲ್ಲಾ ಸಂಗತಿಗಳನ್ನು ಸಂಗ್ರಹಿಸುತ್ತಿದ್ದೇವೆ” ಎಂದು ಹೇಳಿದೆ. ಈ ಘಟನೆ ಇಳಿಜಾರಿನ ಕಾರಣದಿಂದ ಸಂಭವಿಸಿರಬಹುದೇ ಹೊರತು ವಾಹನದ ದೋಷದಿಂದಲ್ಲ ಎಂದು ಕಂಪನಿ ಹೇಳಿದೆ. ಆದರೆ ಪ್ರತ್ಯಕ್ಷದರ್ಶಿಗಳು ಕಾರು ‘ಸಮ್ಮನ್ ಮೋಡ್’ನಲ್ಲಿತ್ತು ಎಂದು ಹೇಳುತ್ತಿದ್ದಾರೆ.
ಅಲ್ಲದೆ, ಈ ಕಾರು ಈ ಹಿಂದೆಯೂ ರಸ್ತೆಯ ಮಧ್ಯೆ ಸ್ವಿಚ್ ಆಫ್ ಆಗಿದ್ದ ಸಾಫ್ಟ್‌ವೇರ್ ಸಮಸ್ಯೆಯನ್ನು ಎದುರಿಸಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕುಟುಂಬವು ಇನ್ನೂ ಆಘಾತದಲ್ಲಿದ್ದು, ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಿಲ್ಲ. ಆದರೆ ಟಾಟಾ ಅಧಿಕಾರಿಗಳು ತನಿಖೆಗಾಗಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.