
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕೃತವಾಗಿ ಎಂಟ್ರಿಯಾಗಿದ್ದು, ಇದೀಗ 8 ಮಂದಿ ಆರೋಪಿಗಳನ್ನು ತನಿಖಾ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದೆ.
ಮೇ 1ರಂದು ಬಜಪೆ ಕಿನ್ನಿಪದವು ಬಳಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತರಾಗಿದ್ದ ಸುಹಾಸ್ ಶೆಟ್ಟಿಯು ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾಗಿದ್ದ ಪ್ರಕರಣವು ಜಿಲ್ಲೆಯಲ್ಲಷ್ಟೇ ಅಲ್ಲದೆ , ರಾಜ್ಯದ ರಾಜಕೀಯದಲ್ಲೂ ಸಹ ಬಿರುಗಾಳಿ ಎಬ್ಬಿಸಿತ್ತು. ಈ ಹತ್ಯೆಯ ಬಳಿಕ ಜಿಲ್ಲೆಯಲ್ಲಿ ಉಂಟಾದ ಕೋಮು ಉದ್ವಿಗ್ನತೆ ಹಿನ್ನೆಲೆಯಲ್ಲಿ, ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಕರಣವನ್ನು ಎನ್‌ಐಎಗೆ ನೀಡುವಂತೆ ಆಗ್ರಹಿಸಿತ್ತು.
ಬಿಜೆಪಿ ಈ ಹತ್ಯೆಯಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಕೈವಾಡವಿದೆ ಹಾಗೂ ವಿದೇಶದಿಂದ ಹಣಕಾಸು ನೆರವು ದೊರೆತಿತ್ತು ಎಂದು ಆರೋಪಿಸಿದ್ದರ ಮಧ್ಯೆ, ಕೇಂದ್ರ ಗೃಹ ಇಲಾಖೆ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಈಗಾಗಲೇ 11 ಮಂದಿಯನ್ನು ಬಂಧಿಸಿದ್ದರು. ಬೆಗಳೂರಿನ 50ನೇ ಸಿಸಿಹೆಚ್ ನ್ಯಾಯಾಲಯ ಜುಲೈ 1ರವರೆಗೆ ಎಂಟು ಮಂದಿ ಆರೋಪಿಗಳನ್ನು ಎನ್‌ಐಎ ತನಿಖಾ ವಶಕ್ಕೆ ನೀಡುವಂತೆ ಆದೇಶ ಹೊರಡಿಸಿದೆ. ಎನ್‌ಐಎ ಈಗ ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಿ ತನಿಖೆ ಆರಂಭಿಸಿದೆ.
ಈ ಬೆಳವಣಿಗೆಯ ಬಳಿಕ ಜಿಲ್ಲೆಯಲ್ಲಿಯೇ ಅಲ್ಲದೆ ರಾಜ್ಯದ ರಾಜಕೀಯ ವಲಯದಲ್ಲೂ ಎನ್‌ಐಎ ತನಿಖೆಯ ಬಗ್ಗೆ ವ್ಯಾಪಕ ಕುತೂಹಲ ಮೂಡಿಸಿದೆ.