
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸುವ ಬಗ್ಗೆ ಯಾವುದೇ ವಿರೋಧವಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಬಿಜೆಪಿ ಈ ಪ್ರಕರಣವನ್ನು ಎನ್‌ಐಎಗೆ ನೀಡಬೇಕು ಎಂದು ಒತ್ತಾಯಿಸುತ್ತಿರುವ ಬೆನ್ನಲ್ಲೇ ಮಂಗಳೂರಿನಲ್ಲಿ ಮಾತನಾಡಿದ ಅವರು, “ಸರ್ಕಾರ ತನಿಖೆಯ ಬಗ್ಗೆ ಯಾವ ಸಂಸ್ಥೆ ತನಿಖೆ ನಡೆಸಬೇಕೆಂದು ತೀರ್ಮಾನ ಮಾಡಲಿ. ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ತಪ್ಪಿಸಿಕೊಳ್ಳದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ನಡೆಯಬೇಕು” ಎಂದು ಸ್ಪಷ್ಟಪಡಿಸಿದರು.
“ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಸ್ತ್ರ ಶಿಕ್ಷೆ ಅನಿವಾರ್ಯ. ಯಾರಿಗೂ ಕೊಲೆ ಮಾಡುವ ಹಕ್ಕಿಲ್ಲ. ಎಲ್ಲ ರೀತಿಯ ತನಿಖೆ ನಡೆಯಬೇಕು. ಪೊಲೀಸರು ಸೂಕ್ತ ವರದಿ ಸಲ್ಲಿಸಬೇಕು. ತಪ್ಪು ಮಾಡಿದವರ ಬೆಂಬಲಗಾರನಾಗಿ ನಾನಿಲ್ಲ. ನನಗೆ ಸಿಕ್ಕ ಮಾಹಿತಿಯನ್ನು ಜನರ ಮುಂದೆ ಬಿಟ್ಟಿದ್ದೇನೆ. ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಅಗತ್ಯ.”ಎಂದು ಅವರು ತಿಳಿಸಿದರು.
ರಾಜಕೀಯ ಟೀಕೆಗಳಿಗೆ ಖಾದರ್ ಉತ್ತರ:
“ನನ್ನ ಮೇಲೆ ಟೀಕೆ ಮಾಡುವುದು ಹೊಸ ವಿಷಯವಲ್ಲ. ದೇವರ, ಜನರ ಆಶೀರ್ವಾದ ನನ್ನ ಜೊತೆ ಇದೆ. ಕ್ರಿಕೆಟ್ ಪಂದ್ಯದಲ್ಲಿ ನಾನು ಹಾಜರಾಗಲಿಲ್ಲ ಎಂಬ ಆರೋಪದ ವಿಚಾರವನ್ನೂ ನಾನು ಸ್ಪಷ್ಟಪಡಿಸಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆಯ ವಾತಾವರಣ ಇರಬೇಕೆಂಬುದೇ ನನ್ನ ಆಶಯ” ಎಂದು ಹೇಳಿದ್ದಾರೆ.