
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಈಗ ಹೊಸ ತಿರುವು ಕಾಣಿಸಿದ್ದು, ಬಜಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಶೀದ್ ಅವರ ಮೇಲೆ ನೇರವಾಗಿ ಈ ಕೃತ್ಯಕ್ಕೆ ಸಹಕಾರ ನೀಡಿದ್ದಾನೆಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಪಬ್ಲಿಕ್ ಟಿವಿ ವಾಹಿನಿಯ ವರದಿಯ ಪ್ರಕಾರ, ಹತ್ಯೆಯಲ್ಲಿ ಪೊಲೀಸ್ ಇಲಾಖೆಯೊಳಗಿನ ನಿರ್ಲಕ್ಷ್ಯವಷ್ಟೇ ಅಲ್ಲ, ಕುಖ್ಯಾತ ಸಂಚು ನಡೆಸಿರುವ ಶಂಕೆ ಹೆಚ್ಚುತ್ತಿದೆ.
ಸುಳ್ಯದ ಮೂಲದ ಸುಹಾಸ್ ಶೆಟ್ಟಿ ಬಜಪೆ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಬಜಪೆ ಠಾಣೆಯ ವ್ಯಾಪ್ತಿಗೆ ಬರುವ ವ್ಯಕ್ತಿಯಾಗಿದ್ದರು. ಮೃತನ ತಾಯಿ ಆರಂಭದಿಂದಲೂ “ಬಜಪೆ ಪೊಲೀಸರೇ ನನ್ನ ಮಗನನ್ನು ಸಾಯುವಂತೆ ಮಾಡಿದ್ದಾರೆ” ಎಂಬ ಗಂಭೀರ ಹೇಳಿಕೆ ನೀಡುತ್ತಿದ್ದರೂ, ಈಗ ಬಹಿರಂಗಗೊಳ್ಳುತ್ತಿರುವ ಹಲವು ಸ್ಫೋಟಕ ಮಾಹಿತಿಗಳು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ನೀಡಿದೆ.
ಸುದ್ದಿಯ ಪ್ರಕಾರ, ಬಜಪೆ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಶೀದ್, ಸುಹಾಸ್‌ರನ್ನು ಪದೇಪದೆ ಠಾಣೆಗೆ ಕರೆಸಿ, ಕಿರುಕುಳ ನೀಡುತ್ತಿದ್ದ. ಕಳೆದ ಒಂದು ವಾರದ ಹಿಂದೆ, ಕುಡುಪು ಪ್ರದೇಶದಲ್ಲಿ ಅಶ್ರಫ್ ಎಂಬಾತನ ಗುಂಪು ಹತ್ಯೆ ಮಾಡಿದ ದಿನವೂ, ರಶೀದ್ ಅವರು ಸುಹಾಸ್ ಶೆಟ್ಟಿಯನ್ನು ಠಾಣೆಗೆ ಕರೆಸಿ, “ನಿನ್ನ ಬಳಿ ಮಾರಕಾಸ್ತ್ರ ಇರಬಾರದು,ನಿನ್ನ ಜೊತೆ ಯಾರೂ ಯುವಕರು ಇರಬಾರದು, ಹೆಚ್ಚಿಗೆ ಓಡಾಡಬೇಡ ಎಂದು ಎಚ್ಚರಿಕೆ ನೀಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ, ವಿಎಚ್‌ಪಿ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಮತ್ತು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಕೆ.ಟಿ. ಉಲ್ಲಾಸ್ ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದು, “ಹೆಡ್ ಕಾನ್ಸ್‌ಟೇಬಲ್ ರಶೀದ್ ಅವರು ಸುಹಾಸ್ ಶೆಟ್ಟಿಯ ಚಲನವಲನಗಳ ಹಾಗೂ ನಿರಾಯುಧನಾಗಿ ಇದ್ದಾನೆ ಎಂಬ ಮಾಹಿತಿ ಹಂತಕರಿಗೆ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಆರೋಪಗಳು ಸುಹಾಸ್ ಶೆಟ್ಟಿಯ ಹತ್ಯೆಯಲ್ಲಿ ಪೊಲೀಸ್ ಇಲಾಖೆಯ ಕೆಲವು ಸಿಬ್ಬಂದಿಗಳ ನೇರ ಅಥವಾ ಪರೋಕ್ಷ ಸಂಬಂಧವನ್ನು ತೋರಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ಮೂಡಿಸಿದೆ. ಈ ಪ್ರಕರಣದ ನ್ಯಾಯಸಮ್ಮತ, ಸುವ್ಯವಸ್ಥಿತ ತನಿಖೆ ನಡೆಸಿ ಸತ್ಯವನ್ನು ಬಯಲಿಗೆ ತರಬೇಕೆಂದು ಜನಪ್ರತಿನಿಧಿಗಳು ಮತ್ತು ಹಿಂದು ಸಂಘಟನೆಗಳು ಆಗ್ರಹಿಸುತ್ತಿವೆ.