
ಕಲಬುರ್ಗಿ : ದಿಢೀರ್ ಹೃದಯಾಘಾತಕ್ಕೂ ಮುನ್ಸೂಚನೆ ಇದ್ದೇ ಇರುತ್ತದೆ, ಅದನ್ನು ನಾವು ಸರಿಯಾಗಿ ಗಮನಿಸಬೇಕಷ್ಟೇ ಎಂದು ಬಸವೇಶ್ವರ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ। ಸುರೇಶ್ ಹರಸೂರರವರು ಹೇಳಿದರು. ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸೀರಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿ ಸಂಪೂರ್ಣ ಬದಲಾಗಿದೆ. ಆರೋಗ್ಯಯುತ ಸಾಂಪ್ರದಾಯಿಕ ಆಹಾರ ಪದ್ಧತಿಗಳು ಕಡಿಮೆಯಾಗುತ್ತಿವೆ ಬದಲಾಗಿ ಜಂಕ್ ಫುಡ್ಸ್, ಪಾಸ್ಟ್ ಪುಡ್ ಗಳ ಸೇವನೆ ವಿಪರೀತವಾಗಿದೆ. ಇದರಿಂದಾಗಿ ದೇಹದಲ್ಲಿ ಕೆಟ್ಟ ಕೋಲೆಸ್ಟ್ರಾಲ್ ಹೆಚ್ಚಾಗಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಯಂತಹ ರೋಗಗಳು ಯುವಕರಲ್ಲಿ ಕಾಣಿಸಲು ಪ್ರಾರಂಭವಾಗಿವೆ ಎಂದು ಹೇಳಿದರು. ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯಿಂದ ತಮ್ಮ ಅಮೂಲ್ಯವಾದ ಜೀವನಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ನಡೆಯುವಾಗ, ಓಡುವಾಗ, ಮೆಟ್ಟಿಲು ಹತ್ತುವಾಗ ಹೃದಯದ ನೋವು ಬಂದರೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಸಲಹೆ ಪಡೆಯುವುದು ಅವಶ್ಯಕವಾಗಿದೆ. ಹೃದಯ ನೋವಿಗೂ ಗ್ಯಾಸ್ಟ್ರಿಕ್ ನೋವಿಗೂ ಸಾಮ್ಯತೆ ಇದ್ದು ವೈದ್ಯರ ಸಲಹೆ ಪಡೆಯುವುದು ಅವಶ್ಯಕವಾಗಿದೆ ಗ್ಯಾಸ್ಟ್ರಿಕ್ ನೋವೆಂದು ತಿಳಿದು ನಿರ್ಲಕ್ಷ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಅತ್ಯುತ್ತಮ ಆಹಾರ ಪದ್ಧತಿಗಳು, ಹಸಿರು ತರಕಾರಿ, ಹಣ್ಣುಗಳ ಸೇವನೆ ಮಾಡಬೇಕು ಎಂದು ತಿಳಿಸಿದರು.
ಮಧ್ಯಮ ತೀವ್ರತೆಯ ವ್ಯಾಯಾಮ ಉತ್ತಮ :
ಎಲ್ಲವೂ ಮಿತಿಯೊಳಗೆ ಇದ್ದರೆ ಸೂಕ್ತ. ಮ್ಯಾರ ಥಾನ್, ದೂರ ಓಟ, ನಿರ್ಜಲೀಕರಣವಾದಾಗ ನೀರು ಕುಡಿಯದಿರುವುದು, ಜಿಮ್‌ನಲ್ಲಿ ಅತಿಯಾದ ಭಾರ ಎತ್ತುವುದು, ಇದೆಲ್ಲ ಹೃದಯಕ್ಕೆ ಹೊರೆ. ಬದಲಿಗೆ ವಾಕಿಂಗ್, ಟ್ರಡ್‌ಮಿಲ್, ಈಜು, ಯೋಗ, ಪ್ರಾಣಾಯಾಮ ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಪೂರಕ. ದೇಹಕ್ಕೆ ಕೆಲವರು ಪ್ರೊಟೀನ್ ಪೌಡರ್ ಇತ್ಯಾದಿ ತೆಗೆದುಕೊಳ್ಳುತ್ತಾರೆ, ಕೆಲವದರಲ್ಲಿ ಸ್ಟಿರಾಯ್ ಇರುತ್ತದೆ, ಸ್ನಾಯುಗಳನ್ನು ಬಲಪಡಿಸಲು ಅದನ್ನು ಬಳಸುತ್ತಾರೆ, ಆದರೆ ಅದರಿಂದ ಹೃದಯಕ್ಕೆ ಹಾನಿಯಾಗುತ್ತದೆ. ಎಚ್ಚರ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ 79 ವಿದ್ಯಾರ್ಥಿನಿಯರು ಹಾಗೂ 10 ಸಿಬ್ಬಂದಿಗಳ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯ ಸಮಸ್ಯೆ ಇರುವ ವಿದ್ಯಾರ್ಥಿಗಳಿಗೆ ತಜ್ಞ ವೈದ್ಯರಿಂದ ಉಚಿತ ಸಲಹೆ ಹಾಗೂ ಸಂಬಂಧಿಸಿದ ಔಷಧ ನೀಡಲಾಯಿತು.
ಈ ಸಂದರ್ಭದಲ್ಲಿ ಬಸವೇಶ್ವರ ಆಸ್ಪತ್ರೆಯ ತಜ್ಞ ವೈದ್ಯರ ತಂಡ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ ಮೋಹನರಾಜ ಪತ್ತಾರ, ಕಾಲೇಜಿನ ಆಯುಷ್ಮಾನ ಆರೋಗ್ಯ ಯೋಜನೆ ಸಂಚಾಲಕಿ ಸರೋಜಾದೇವಿ ಪಾಟೀಲ್ ಬಸವೇಶ್ವರ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರೀಯದರ್ಶೀನಿ ಟೆಂಗಳಿ ಹಾಗೂ ಅವರ ತಂಡ ಮತ್ತು ಕಾಲೇಜಿನ ಸಿಬ್ಬಂದಿಗಳು ಹಾಜರಿದ್ದರು.

ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಹೃದಯಾಘಾತದಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಬಸವೇಶ್ವರ ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ್ ದೇಶಮುಖ್ ಹಾಗೂ ಡಾ ಶರಣಬಸಪ್ಪ ಹರವಾಳ ಹಾಗೂ ಎಲ್ಲಾ ಆಡಳಿತ ಮಂಡಳಿ ಸದಸ್ಯರು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ, ವೈದ್ಯಕೀಯ ಸಲಹೆ, ಔಷಧೋಪಚಾರ ನೀಡುತ್ತಿರುವುದು ಅಭಿನಂದನಾರ್ಹ. ಇಂತಹ ಉಚಿತ ಆರೋಗ್ಯ ತಪಾಸಣೆ ನೀಡುತ್ತಿರುವ ನಮ್ಮ ಸಂಸ್ಥೆಯ ವೈದ್ಯಕೀಯ ತಂಡಕ್ಕೆ ಅನಂತ ವಂದನೆಗಳು.
ಸರೋಜಾದೇವಿ ಪಾಟೀಲ್
ಆಯುಷ್ಮಾನ ಆರೋಗ್ಯ ಯೋಜನೆ ಸಂಚಾಲಕಿ
ವಿ ಜಿ ಪಿ ಯು ಕಾಲೇಜು