
ಬೆಂಗಳೂರು:ಬೆಂಗಳೂರಿನಲ್ಲಿ ನಕಲಿ ದಾಖಲೆಗಳನ್ನು ಬಳಸಿ ನ್ಯಾಯಾಲಯಗಳಿಗೆ ಸಲ್ಲಿಸಿ, ಆರೋಪಿಗಳಿಗೆ ಅಕ್ರಮವಾಗಿ ಜಾಮೀನು ಕೊಡಿಸುತ್ತಿದ್ದ ಬೃಹತ್ ದಂಧೆಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಪತ್ತೆ ಹಚ್ಚಿ, ಎಂಟು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 47 ನಕಲಿ ಆಧಾರ್ ಕಾರ್ಡ್‌ಗಳು, ಪಹಣಿ ಸೇರಿದಂತೆ ಒಟ್ಟು 122 ನಕಲಿ ದಾಖಲೆಗಳು, ನಕಲಿ ಸ್ಟ್ಯಾಂಪ್‌ಗಳು, ಒಂದು ಪೆನ್‌ಡ್ರೈವ್ ಮತ್ತು ಏಳು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಮ್ಯಾಜಿಸ್ಟ್ರೇಟ್ ಮತ್ತು ಸಿವಿಲ್ ನ್ಯಾಯಾಲಯಗಳ ಆವರಣದಲ್ಲಿ ಓಡಾಡುತ್ತಾ, ಜೈಲಿನಲ್ಲಿರುವ ಕೈದಿಗಳ ಸಂಬಂಧಿಕರನ್ನು ಗುರಿಯಾಗಿಸಿಕೊಂಡು ಸಂಪರ್ಕ ಸಾಧಿಸುತ್ತಿದ್ದರು. ಜಾಮೀನಿಗೆ ಅಗತ್ಯವಿರುವ ಶೂರಿಟಿಗಳಿಗಾಗಿ 50,000 ರೂ.ಗಳಿಂದ 2 ಲಕ್ಷ ರೂ.ಗಳವರೆಗೆ ಹಣದ ಒಪ್ಪಂದ ಮಾಡಿಕೊಂಡು, ಅದಕ್ಕೆ ಪೂರಕವಾಗಿ ನಕಲಿ ದಾಖಲೆಗಳನ್ನು ಒದಗಿಸುತ್ತಿದ್ದರು.
ಈ ಗುಂಪು “ಭೂಮಿ” ತಂತ್ರಾಂಶದಿಂದ ಜಮೀನಿನ ಪಹಣಿ (ಆರ್‌ಟಿಸಿ) ಡೌನ್‌ಲೋಡ್ ಮಾಡಿಕೊಂಡು, ನಂತರ ಅಸಲಿ ರೈತರ ಹೆಸರಿನಲ್ಲೇ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸುತ್ತಿತ್ತು. ಈ ನಕಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಜಾಮೀನು ಪಡೆಯಲು ಸಹಾಯ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಸೂತ್ರಧಾರ ಪ್ರವೀಣ್‌ಕುಮಾರ್: ಬಂಧಿತ ಆರೋಪಿಗಳ ಪೈಕಿ ಪ್ರವೀಣ್‌ಕುಮಾರ್ ಈ ನಕಲಿ ದಾಖಲೆಗಳ ತಯಾರಿಕೆಯ ಸೂತ್ರಧಾರ ಎನ್ನಲಾಗಿದ್ದು, ಆತನ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಈಗಾಗಲೇ ಐದಾರು ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ. ಈ ದಂಧೆಯಲ್ಲಿ ಯಾರ ಸೂಚನೆಯ ಮೇರೆಗೆ ಇವರು ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದರು ಹಾಗೂ ಇಲ್ಲಿಯವರೆಗೆ ಎಷ್ಟು ಜನರಿಗೆ ಈ ರೀತಿ ಜಾಮೀನು ಕೊಡಿಸಿದ್ದಾರೆ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬಿಎಂಟಿಸಿ ಸಿಬ್ಬಂದಿ ಹೆಸರಿನಲ್ಲಿ ವಂಚನೆ: ಆರೋಪಿಗಳಾದ ಅಬೀದ್ ವಾಸೀಂ, ಅಹ್ಮದ್ ಜುಬೇರ್ ಮತ್ತು ಗೋವಿಂದರಾಜು ಅವರು ಸರ್ಕಾರಿ ನೌಕರರ ಹೆಸರಿನಲ್ಲಿ, ವಿಶೇಷವಾಗಿ ಬಿಎಂಟಿಸಿ ಚಾಲಕರು, ನಿರ್ವಾಹಕರು ಅಥವಾ ಇತರ ಸಿಬ್ಬಂದಿಯ ನಕಲಿ ದಾಖಲೆಗಳನ್ನು ಸಿದ್ಧಪಡಿಸಿ ಜಾಮೀನು ಕೊಡಿಸುತ್ತಿದ್ದರು. ಪರಿಚಯಸ್ಥರ ಮೂಲಕ ಬಿಎಂಟಿಸಿ ಸಿಬ್ಬಂದಿಯ ಸಂಬಳ ಪತ್ರಗಳನ್ನು ಪಡೆದು, ಅದಕ್ಕೆ ಪೂರಕವಾಗಿ ಇತರ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.