
ಸಾಗರ : ಶಿವಮೊಗ್ಗ ಜಿಲ್ಲೆಯ ಸಿಗಂದೂರಿನ ಹೊಳೆಬಾಗಿಲಿನಲ್ಲಿ ನದೀ ದಾಟುವ ಲಾಂಚ್‌ನ ಸ್ಟೀರಿಂಗ್ ಜಾಮ್ ಆದ ಪರಿಣಾಮ, ನೂರಾರು ಪ್ರಯಾಣಿಕರು ಹಾಗೂ ವಾಹನಗಳು ಕೆಲಕಾಲ ನದಿಯಲ್ಲಿ ಅತೀವ ಆತಂಕದ ವಾತಾವರಣವನ್ನು ಅನುಭವಿಸಿದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಲಾಂಚ್‌ನಲ್ಲಿದ್ದವರು ಭಯಭೀತರಾಗಿದ್ದು, ಮಳೆಗಾಲದ ಗಾಳಿ ಕಾರಣಕ್ಕೆ ದಿಕ್ಕು ತಪ್ಪಿದೆ ಎಂದು ದಡದಲ್ಲಿದ್ದವರು ಭಾವಿಸಿದ್ದರು. ಆದರೆ ಹತ್ತಿರದಲ್ಲಿದ್ದ ದಿಲೀಪ್ ಬಿಲ್ಡರ್ಸ್‌ನ ಬೋಟಿನಿಂದ ಲಾಂಚ್‌ಗೆ ಸಹಾಯ ನೀಡಿ ಅದನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಲಾಯಿತು.

ಲಾಂಚ್‌ದಲ್ಲಿ ತಾಂತ್ರಿಕ ದೋಷ ಇತ್ತೀಚಿನದ್ದಲ್ಲ. ಸ್ಥಳೀಯರ ಪ್ರಕಾರ, ಈ ಲಾಂಚ್ ಈಗಾಗಲೇ ಹಾಳಾಗಿದ್ದು, ಹಲವು ದಿನಗಳಿಂದ ರಿಪೇರಿ ಮಾಡದೆ ಉಪೇಕ್ಷಿತ ಸ್ಥಿತಿಯಲ್ಲಿತ್ತು. ತಿಂಗಳಿಗೆ ಸರಾಸರಿ 40 ಲಕ್ಷಕ್ಕೂ ಅಧಿಕ ಆದಾಯ ನೀಡುವ ಲಾಂಚ್‌ಗಳ ನಿರ್ವಹಣೆ ಅತಂತ್ರವಾಗಿರುವುದು ಪ್ರಶ್ನೆಯಾಗಿದ್ದು, ಸಾರ್ವಜನಿಕರು ಕಿಡಿಕಾರಿದ್ದಾರೆ.
ಸೇತುವೆ ಉದ್ಘಾಟನೆ ತಡವಾದರೂ, ಲಾಂಚ್‌ಗಳ ಸರಿಯಾದ ನಿರ್ವಹಣೆ ಖಚಿತಪಡಿಸಿ ಸಂಚಾರಕ್ಕೆ ಅವಕಾಶ ನೀಡಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ. ಅರೆಕಾಲಿಕ ನೌಕರರ ವೇತನ ಪಾವತಿಯಾಗದೇ ಆರು ತಿಂಗಳಿನಿಂದ ಬಾಕಿ ಇರುವ ಕಾರಣದಿಂದಾಗಿ ನಿರ್ಲಕ್ಷ್ಯ ಮತ್ತು ನಿರ್ವಹಣಾ ಕೊರತೆ ಏಳಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.