
ಮೈಸೂರು: ಮೈಸೂರು ನಗರದ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಕೆ.ವಿ. ಸ್ಟ್ಯಾನ್ಲಿ ಅವರು, ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ಅಪಪ್ರಚಾರದ ಸಂದೇಶಗಳನ್ನು ಹರಡುತ್ತಿರುವ ಆರೋಪದ ಮೇಲೆ ವಸಂತ ಗಿಳಿಯಾರ್ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೂರಿನ ವಿವರಗಳ ಪ್ರಕಾರ, ಸ್ಟ್ಯಾನ್ಲಿ ಅವರು ಕಳೆದ 35 ವರ್ಷಗಳಿಂದ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಭಾರೀ ಸುದ್ದಿಯಲ್ಲಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನ್ಯಾಯಕ್ಕಾಗಿ ಒಡನಾಡಿ ಸಂಸ್ಥೆ ಕಾನೂನಾತ್ಮಕ ಹೋರಾಟ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ, ಉಡುಪಿ ಜಿಲ್ಲೆಯ ಕೋಟಾ ಗ್ರಾಮದ ನಿವಾಸಿಯಾಗಿರುವ ವಸಂತ ಗಿಳಿಯಾರ್ ಅವರು, ಸ್ಟ್ಯಾನ್ಲಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ವಸಂತ ಗಿಳಿಯಾರ್ ಅವರು ಸ್ಟ್ಯಾನ್ಲಿಯನ್ನು ಕ್ರೈಸ್ತ ಧರ್ಮಕ್ಕೆ ಸೇರಿದವರು ಎಂದು ಗುರುತಿಸಿ, “ಹಿಂದೂ ಧರ್ಮ ಮತ್ತು ದೇವಸ್ಥಾನಗಳನ್ನು ನಾಶ ಮಾಡಲು ಬಂದಿದ್ದಾರೆ” ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅಲ್ಲದೆ, “ಒಡನಾಡಿಯ ಸ್ಟ್ಯಾನ್ಲಿ ಧರ್ಮಸ್ಥಳವನ್ನು ಹಂದಿಯಂತೆ ಹೊಡೆಯಬೇಕೆಂದು ಹೇಳಿದ್ದಾರೆ” ಎಂಬಂತಹ ಪ್ರಚೋದನಕಾರಿ ವದಂತಿಗಳನ್ನು ಸುದ್ದಿ ಚಾನೆಲ್‌ಗಳು, ಸಾಮಾಜಿಕ ಜಾಲತಾಣಗಳು ಮತ್ತು ಸಾರ್ವಜನಿಕ ಸಭೆಗಳಲ್ಲಿ ಹರಡಿ, ಸಮಾಜದಲ್ಲಿ ಧಾರ್ಮಿಕ ವೈಷಮ್ಯ ಮತ್ತು ದ್ವೇಷವನ್ನು ಹರಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸುಳ್ಳು ಪ್ರಚಾರದಿಂದಾಗಿ ಸ್ಟ್ಯಾನ್ಲಿ ಅವರ ವೈಯಕ್ತಿಕ ಗೌರವ ಮತ್ತು ಒಡನಾಡಿ ಸಂಸ್ಥೆಯ ಆಶ್ರಿತರ ಸುರಕ್ಷತೆಗೆ ಧಕ್ಕೆಯಾಗಿದೆ. ಗಿಳಿಯಾರ್‌ನ ಈ ದುರುದ್ದೇಶಪೂರಿತ ಹೇಳಿಕೆಗಳಿಂದ ಸಮಾಜದ ವಿವಿಧ ವರ್ಗಗಳ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಟ್ಯಾನ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಸ್ಟ್ಯಾನ್ಲಿ ಅವರು ವಸಂತ ಗಿಳಿಯಾರ್‌ಗೆ ನೋಟಿಸ್ ಕಳುಹಿಸಿದರೂ, ಅವರು ಅದನ್ನು ಸ್ವೀಕರಿಸಿಲ್ಲ. ಗಿಳಿಯಾರ್‌ನ ಸುಳ್ಳು ಪ್ರಚಾರವನ್ನು ನಂಬಿದ ಅನೇಕ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸ್ಟ್ಯಾನ್ಲಿ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಸಹ ದೂರಿನಲ್ಲಿ ಹೇಳಲಾಗಿದೆ.
ದೂರಿನ ಗಂಭೀರತೆಯನ್ನು ಪರಿಗಣಿಸಿ, ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಸಂತ ಗಿಳಿಯಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.