
ಅಥಣಿ (ಬೆಳಗಾವಿ ಜಿಲ್ಲೆ): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದೇವರಡ್ಡೆರಟ್ಟಿ ಗ್ರಾಮದಲ್ಲಿ ತೋಟದ ಕೃಷಿ ಹೊಂಡದಲ್ಲಿ ತಾಯಿ ಮೊಸಳೆ ಹಾಗೂ ಸುಮಾರು 50ಕ್ಕೂ ಹೆಚ್ಚು ಮೊಸಳೆ ಮರಿಗಳು ಪತ್ತೆಯಾಗಿರುವ ಆತಂಕಕಾರಿ ಘಟನೆ ವರದಿಯಾಗಿದೆ.
ಅಪ್ಪಾಸಾಬ ಸತ್ಯಪ್ಪ ನಾಯಕ ಎಂಬುವವರ ತೋಟದ ಹೊಂಡದಲ್ಲಿ ಕಳೆದ ಕೆಲವು ದಿನಗಳಿಂದ ತಾಯಿ ಮೊಸಳೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಮಧ್ಯೆ ಮಂಗಳವಾರ ಬೆಳಗ್ಗೆ ಹೊಂಡದ ಬಳಿಯ ಗದ್ದೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಮೊಸಳೆ ಮರಿಗಳು ನೆಲದ ಮೇಲೆಯೇ ಹರಿದಾಡಿದ ದೃಶ್ಯ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಭೀತಿಗೊಂಡಿದ್ದಾರೆ .
ಇನ್ನು ತಾಯಿ ಮೊಸಳೆ ಹಾಗೂ ಮರಿಗಳನ್ನು ಸ್ಥಳೀಯ ಗ್ರಾಮಸ್ಥರು ಎಚ್ಚರಿಕೆಯಿಂದ ಸೆರೆಹಿಡಿದು, ಅರ್ಧ ದಿನದೊಳಗೆ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ತಾಯಿ ಮೊಸಳೆಯನ್ನು ಕೂಡಲೇ ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಬೇಕೆಂದು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೊಸಳೆಗಳ ರಕ್ಷಣೆ ಹಾಗೂ ಪುನರ್ವಸತಿ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ . ಮೊಸಳೆಗಳು ಗ್ರಾಮಾಂತರ ಪ್ರದೇಶದ ಕೃಷಿ ಹೊಂಡಗಳಲ್ಲಿ ಹೆಚ್ಚುತ್ತಿರುವ ಬಗ್ಗೆ ಕೂಡ ಅವರು ಮಾಹಿತಿ ಪಡೆದಿದ್ದಾರೆ.
































