
ಬೆಳ್ತಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಬಸ್‌ನ ಮುಂಭಾಗದ ಗಾಜು ಒಡೆದು ಸುಮಾರು 15,000 ರೂಪಾಯಿಗಳ ನಷ್ಟ ಸಂಭವಿಸಿದೆ.
ಘಟನೆಯ ಕುರಿತು ದೂರು ನೀಡಿರುವವರು ಧರ್ಮಸ್ಥಳ ಘಟಕದ ಸಂಚಾರ ನಿಯಂತ್ರಕ ಪಿ. ದಾವೂದ್ (54). ಆಗಸ್ಟ್ 5 ರಂದು ಮಧ್ಯಾಹ್ನ, ಧರ್ಮಸ್ಥಳ ಡಿಪೋದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎ-21ಎಫ್-0103 ಸಂಖ್ಯೆಯ ಬಸ್, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪುದುವೆಟ್ಟು ಕ್ರಾಸ್ ಬಳಿ ತಲುಪಿದಾಗ ಈ ಕೃತ್ಯ ನಡೆದಿದೆ.
ಎದುರಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಬಸ್‌ನ ಮುಂಭಾಗದ ಗಾಜಿಗೆ ಕಲ್ಲು ಹೊಡೆದು ಪರಾರಿಯಾಗಿದ್ದಾನೆ. ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ತನಿಖೆ ನಡೆಸುತ್ತಿದ್ದಾರೆ.