
ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ಅಲ್ಪಸಂಖ್ಯಾತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಆರೋಪದ ಮೇಲೆ ಬೆಂಗಳೂರಿನ ಡಿಜೆ ಹಳ್ಳಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಮಹಿಳೆಯ ದೂರಿನ ಆಧಾರದ ಮೇಲೆ ಪೂರ್ವ ವಿಭಾಗದ ಗೋವಿಂದಪುರ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಸುನಿಲ್ ಮತ್ತು ಎಎಸ್‌ಐ ಪ್ರಕಾಶ್ ರಾಥೋಡ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಎಎಸ್‌ಐ ಪ್ರಕಾಶ್ ರಾಥೋಡ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಬ್ಲ್ಯಾಕ್‌ಮೇಲ್ ಮತ್ತು ಕೊಲೆ ಬೆದರಿಕೆ ಆರೋಪ
36 ವರ್ಷದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಪ್ರಕಾರ, ಇನ್ಸ್‌ಪೆಕ್ಟರ್ ಸುನಿಲ್ ರಿಜಿಸ್ಟ್ರಾರ್ ಮ್ಯಾರೇಜ್ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಆಕೆಯನ್ನು ಎಂಟನೇ ಮೈಲಿಯಲ್ಲಿರುವ ಮನೆಗೆ ಹಾಗೂ ಹೋಟೆಲ್‌ಗಳಿಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ.
ಬಳಿಕ ಸಂತ್ರಸ್ತೆಯ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. “ನಮ್ಮ ವಿಚಾರ ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲ್ಲುವುದಾಗಿ” ಜೀವ ಬೆದರಿಕೆ ಹಾಕಿದ್ದಲ್ಲದೆ, “ಪ್ರತಿ ಬಾರಿಯೂ ವಿಡಿಯೋ ಕಾಲ್ ಮಾಡು” ಎಂದು ಆರೋಪಿ ಪೀಡಿಸುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ಸಂತ್ರಸ್ತೆ ಮೊದಲು ಡಿಜಿ ಕಚೇರಿಗೆ ದೂರು ನೀಡಿದ್ದು, ನಂತರ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.



































