
ಬೆಂಗಳೂರು: ನಗರದಲ್ಲಿ ನಡೆದ ಎನ್‌ಐಎ ದಾಳಿಗಳಲ್ಲಿ ಭಯೋತ್ಪಾದಕರಿಗೆ ಬೆಂಬಲ ನೀಡಿದ ಆರೋಪದಡಿ ಮೂವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಚಾಂದ್ ಪಾಷಾ, ಅನೀಸ್ ಫಾತಿಮಾ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ನಾಗರಾಜ್ ಬಂಧಿತರು. ಎನ್‌ಐಎ ಅಧಿಕಾರಿಗಳು ಈ ಮೂವರನ್ನು ಬುಧವಾರ ಎನ್‌ಐಎ ವಿಶೇಷ ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು ಜುಲೈ 14ರವರೆಗೆ ಎನ್‌ಐಎ ಕಸ್ಟಡಿಗೆ ನೀಡಿ ಆದೇಶಿಸಿದೆ.
ಬಂಧಿತರು ದಕ್ಷಿಣ ಭಾರತದಲ್ಲಿ ನಡೆದ ಹಲವು ಸ್ಫೋಟಗಳ ಮಾಸ್ಟರ್‌ಮೈಂಡ್ ಆಗಿರುವ ನಾಸೀರ್‌ನೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಹತ್ವದ ಸುಳಿವು ಎನ್‌ಐಎಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ಆರು ದಿನಗಳ ಕಾಲ ವಿಚಾರಣೆ ತೀವ್ರಗೊಳ್ಳುವ ಸಾಧ್ಯತೆ ಇದೆ.
ಉಗ್ರ ನಾಸೀರ್, ಕೊಲೆ ಪ್ರಕರಣದಲ್ಲಿ ಪರಿಚಿತನಾಗಿದ್ದ ಯುವಕರ ತಂಡವೊಂದನ್ನು ಕಟ್ಟಿದ್ದ. ಈ ತಂಡದಲ್ಲಿ ಜುನೇದ್, ಮೊಹಮ್ಮದ್ ಹರ್ಷದ್ ಖಾನ್, ಸುಹೇಲ್, ಫೈಜಲ್, ಜಾಹಿದ್ ತಬ್ರೇಜ್ ಮತ್ತು ಮುದಾಸಿರ್ ಇದ್ದರು. ಈ ತಂಡವು ಗ್ರೆನೇಡ್‌ಗಳು, ಪಿಸ್ತೂಲ್‌ಗಳು ಮತ್ತು ಸ್ಫೋಟಕ ವಸ್ತುಗಳೊಂದಿಗೆ ಬೆಂಗಳೂರಿನ ಆರ್.ಟಿ.ನಗರ ಮತ್ತು ಹೆಬ್ಬಾಳದಲ್ಲಿ ಸಿಕ್ಕಿಬಿದ್ದಿತ್ತು. ಪ್ರಸ್ತುತ ಪ್ರಮುಖ ಆರೋಪಿ ಜುನೈದ್‌ಗಾಗಿ ಎನ್‌ಐಎ ಹುಡುಕಾಟ ನಡೆಸುತ್ತಿದ್ದು, ಈತನನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ವೇಳೆ ಡಾ. ನಾಗರಾಜ್, ಚಾಂದ್ ಪಾಷಾ ಮತ್ತು ಅನೀಸ್ ಫಾತಿಮಾ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.