
ಹಾವೇರಿ : ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ಹಾವೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಪರವಾಗಿ ಪ್ರಬಲವಾಗಿ ಮಾತನಾಡಿದರು. ಕೆಲವು ಶಕ್ತಿಗಳು ಹಿಂದುತ್ವಕ್ಕೆ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಹಾನಿ ಮಾಡಲು ಪಿತೂರಿ ನಡೆಸುತ್ತಿವೆ ಎಂದು ಅವರು ಆರೋಪಿಸಿದರು.
ಪಿತೂರಿಗಳ ವಿರುದ್ಧ ಹಿಂದೂಗಳು ಒಂದಾಗಬೇಕು
“ಕೆಲವರಿಗೆ ಹಿಂದುತ್ವವು ಬೆಳೆಯುತ್ತಿರುವುದು ಮತ್ತು ಇಡೀ ಜಗತ್ತು ಹಿಂದೂ ಧರ್ಮವನ್ನು ಒಪ್ಪಿಕೊಳ್ಳಬಹುದು ಎಂಬ ಭಯ ಕಾಡುತ್ತಿದೆ. ಅದಕ್ಕಾಗಿ ಧಾರ್ಮಿಕ ಸಂಸ್ಥೆಗಳು, ದೇಗುಲಗಳಿಗೆ ಕೆಟ್ಟದ್ದು ಮಾಡಬೇಕೆಂದು ಪಿತೂರಿ ಮಾಡುತ್ತಿದ್ದಾರೆ” ಎಂದು ಸ್ವಾಮೀಜಿ ಹೇಳಿದರು. “ಇವತ್ತು ವೀರೇಂದ್ರ ಹೆಗ್ಗಡೆಯವರಿಗೆ ಬಂದಿರಬಹುದು, ನಾಳೆ ನಮಗೂ ಬರಬಹುದು. ನಾವೆಲ್ಲರೂ ಒಂದಾಗಬೇಕಿದೆ” ಎಂದು ಪಕ್ಕದ ಮನೆಯ ಬೆಂಕಿಯ ಹೋಲಿಕೆ ನೀಡಿ ಎಚ್ಚರಿಕೆ ನೀಡಿದರು. ಏನಾದರೂ ತಪ್ಪುಗಳಿದ್ದರೆ ಅದನ್ನು ಕಾನೂನು ಮತ್ತು ನ್ಯಾಯಾಲಯ ನಿರ್ಧರಿಸುತ್ತದೆ, ನಾವಲ್ಲ ಎಂದೂ ಅವರು ತಿಳಿಸಿದರು.
ಹೆಗ್ಗಡೆಯವರ ಒಳ್ಳೆ ಕೆಲಸಗಳು ಕಾಣಿಸುತ್ತಿಲ್ಲವೇ?
ವೀಂದ್ರ ಹೆಗ್ಗಡೆಯವರು ಗ್ರಾಮೀಣಾಭಿವೃದ್ಧಿಗಾಗಿ ಮಾಡುತ್ತಿರುವ ಉತ್ತಮ ಕಾರ್ಯಗಳನ್ನು ಸ್ವಾಮೀಜಿ ಶ್ಲಾಘಿಸಿದರು. “ಒಳ್ಳೆಯ ಕೆಲಸಗಳನ್ನು ಬಿಟ್ಟು, ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ನಡೆದಿದೆ. ಅವರ ಒಳ್ಳೆಯ ಕಾರ್ಯಗಳನ್ನು ಪ್ರೋತ್ಸಾಹಿಸುವ ಬದಲು ಅಪಖ್ಯಾತಿ ತರುವ ಮತ್ತು ನಕಾರಾತ್ಮಕವಾಗಿ ಬಿಂಬಿಸುವ ಕೆಲಸ ನಡೆಯುತ್ತಿದೆ. ನಾವು ಅವರೊಂದಿಗೆ ನಿಲ್ಲಬೇಕು” ಎಂದು ಹೇಳಿದರು.
ಜೈನರು ಹಿಂದೂ ಧರ್ಮದ ಭಾಗ: ವಿದೇಶಿ ನಿಧಿಗಳ ಬಗ್ಗೆ ಅನುಮಾನ
ಯಾವುದೇ ಜೈನರು ತಾವು ಹಿಂದೂಗಳಲ್ಲ ಎಂದು ಎಂದಿಗೂ ಹೇಳಿಲ್ಲ. ಜೈನರು ಹಾಲಿನಲ್ಲಿ ಬೆರೆತ ಕಲ್ಲುಸಕ್ಕರೆಯಂತೆ ಹಿಂದೂಗಳ ಜೊತೆಗಿದ್ದಾರೆ. ಅವರು ಎಂದಿಗೂ ನಮ್ಮ ಪರಂಪರೆಯನ್ನು ಟೀಕಿಸಿಲ್ಲ ಎಂದು ವಚನಾನಂದ ಸ್ವಾಮೀಜಿ ಸ್ಪಷ್ಟಪಡಿಸಿದರು. ಜೊತೆಗೆ, ಅಲ್ ಜಜೀರಾ ಚಾನೆಲ್‌ನಲ್ಲಿಯೂ ಈ ಕುರಿತು ವರದಿ ಬರುತ್ತಿರುವುದು ಶಂಕೆಯನ್ನು ಹುಟ್ಟುಹಾಕಿದೆ. ಇದಕ್ಕೆ ಯಾರು ಹಣಕಾಸು ಒದಗಿಸುತ್ತಿರಬಹುದು ಎಂದು ಪ್ರಶ್ನಿಸಿದ ಅವರು, “ಅಖಂಡ ಸನಾತನ ತತ್ವಗಳ ವಿರುದ್ಧ ಮೂಲಭೂತವಾದವನ್ನು ಬೆಂಬಲಿಸುವ ಯೂಟ್ಯೂಬರ್‌ಗಳನ್ನು ನಿರ್ಲಕ್ಷಿಸಬೇಕು” ಎಂದು ಕರೆ ನೀಡಿದರು.