
ಕಾರ್ಕಳ ಸೆ. 9: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ (ಕುಪ್ಮಾ), ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಮಾರ್ಪಾಡುಗಳು ಮತ್ತು ಬದಲಾವಣೆಗಳನ್ನು ಸರಕಾರದೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ.
ಈ ಸಂಘಟನೆಯು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರಂಭಗೊಂಡು ಇದೀಗ ರಾಜ್ಯವ್ಯಾಪಿ ತನ್ನ ಸದಸ್ಯತ್ವವನ್ನು ವಿಸ್ತರಿಸಿಕೊಂಡಿದೆ. ಅಂತೆಯೇ ಬೇರೆ ಬೇರೆ ಕಾಲೇಜುಗಳ ಸಾರ್ವತ್ರಿಕ ಸಮಸ್ಯೆಗಳು ಎದುರಾದಾಗ ಕುಪ್ಮಾವು ಸರಕಾರದೊಂದಿಗೆ ಆರೋಗ್ಯಕರವಾದ ಚರ್ಚೆ, ಸಲಹೆ, ಸೂಚನೆಗಳೊಂದಿಗೆ ಆ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ.
ಕುಪ್ಮಾದ ರಾಜ್ಯಮಟ್ಟದ ದ್ವಿತೀಯ ಸಮಾವೇಶವು 2025ರ ಸೆಪ್ಟೆಂಬರ್ ತಿಂಗಳಲ್ಲಿ ದಿನಾಂಕ 12 ಮತ್ತು 13ರಂದು ‘ಎಸ್. ಎಸ್. ಮಲ್ಲಿಕಾರ್ಜುನ ಕಲ್ಚರಲ್ ಸೆಂಟರ್, ಬಿಐಇಟಿ, ದಾವಣಗೆರೆ, ಇಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ನಮ್ಮ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳು ಭಾಗವಹಿಸಬೇಕಾಗಿ “ಕುಪ್ಮಾ” ಈ ಮೂಲಕ ವಿನಂತಿಸಿಕೊಂಡಿದೆ.