
ಉಡುಪಿ: ಹತ್ತನೇ ತರಗತಿಯ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಎಂದರೆ ಒಂದು ರೀತಿಯ ಆತಂಕವಿರುವುದು ಸಹಜ. ಆದರೆ, ವಿಜ್ಞಾನವು ಕೇವಲ ಕಂಠಪಾಠ ಮಾಡುವ ವಿಷಯವಲ್ಲ, ಅದು ಪರಿಕಲ್ಪನೆಗಳನ್ನು ಅರ್ಥೈಸಿಕೊಂಡು ಬರೆಯುವ ಕಲೆ. ಮುಂಬರುವ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಅದಮಾರು ಪೂರ್ಣಪ್ರಜ್ಞ ಶಾಲೆಯ ಶಿಕ್ಷಕಿ ನವ್ಯಾ ಬಿ.ಎಸ್. ಅವರು ವಿದ್ಯಾರ್ಥಿಗಳಿಗೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
ಪರೀಕ್ಷಾ ಕೊಠಡಿಯಲ್ಲಿ ಸಮಯ ಪ್ರಜ್ಞೆ ಮತ್ತು ನಿಖರತೆ
ವಿಜ್ಞಾನ ಪರೀಕ್ಷೆಗೆ ನಿಗದಿಪಡಿಸಿದ 3 ಗಂಟೆಗಳ ಅವಧಿಯಲ್ಲಿ, ಕೇವಲ 150 ನಿಮಿಷಗಳು (2.30 ಗಂಟೆ) ಬರೆಯಲು ಸಾಕಾಗುತ್ತದೆ. ಉಳಿದ ಸಮಯವನ್ನು ಪ್ರಶ್ನೆಪತ್ರಿಕೆಯನ್ನು ಕೂಲಂಕಷವಾಗಿ ಓದಲು ಮೀಸಲಿಡಬೇಕು. ಅತಿ ಉದ್ದವಾದ ವಿವರಣೆಗಳಿಗಿಂತ, ವಿಷಯಕ್ಕೆ ಪೂರಕವಾದ ವೈಜ್ಞಾನಿಕ ಪದಗಳನ್ನು (Keywords) ಬಳಸಿ ಪಾಯಿಂಟ್‌ಗಳ ರೂಪದಲ್ಲಿ ಬರೆಯುವುದರಿಂದ ಉತ್ತರಕ್ಕೆ ಹೆಚ್ಚಿನ ಮೌಲ್ಯ ಸಿಗುತ್ತದೆ. ಅನ್ವಯಿಕ ಪ್ರಶ್ನೆಗಳನ್ನು ಉತ್ತರಿಸುವ ಮುನ್ನ ಅವುಗಳ ಹಿಂದಿನ ಆಶಯವನ್ನು ಅರ್ಥ ಮಾಡಿಕೊಳ್ಳುವುದು ಅತಿ ಮುಖ್ಯ.
ಚಿತ್ರಗಳ ಮೂಲಕ ಅಂಕಗಳ ಬೇಟೆ
ವಿಜ್ಞಾನದಲ್ಲಿ ಚಿತ್ರಗಳೇ ಪ್ರಧಾನ. ಇವುಗಳನ್ನು ಅಚ್ಚುಕಟ್ಟಾಗಿ ಬಿಡಿಸಿ, ಭಾಗಗಳನ್ನು ಸ್ಪಷ್ಟವಾಗಿ ಗುರುತಿಸಿದರೆ ಪೂರ್ಣ ಅಂಕಗಳು ಖಚಿತ.
- ಜೀವವಿಜ್ಞಾನ: ಮಾನವನ ಮೆದುಳು, ಹೃದಯ, ನೆಫ್ರಾನ್ ರಚನೆ ಹಾಗೂ ಪುಷ್ಪದ ಶಲಾಕಾಗ್ರದ ಮೇಲೆ ಪರಾಗದ ಮೊಳೆಯುವಿಕೆ ಚಿತ್ರಗಳು ಈ ಬಾರಿ ನಿರೀಕ್ಷಿತ. 1 ಅಂಕಕ್ಕೆ ಪತ್ರರಂಧ್ರದ ಚಿತ್ರದ ಮೇಲೆ ಗಮನವಿರಲಿ.
- ರಸಾಯನವಿಜ್ಞಾನ: ಲೋಹಗಳ ಮೇಲೆ ಹಬೆಯ ವರ್ತನೆ, ತಾಮ್ರದ ವಿದ್ಯುತ್ ವಿಭಜನೆ ಹಾಗೂ ಸತುವಿನೊಂದಿಗೆ ಸಲ್ಫ್ಯೂರಿಕ್ ಆಮ್ಲದ ಕ್ರಿಯೆಯ ಚಿತ್ರಗಳು 2 ಅಥವಾ 3 ಅಂಕಗಳಿಗೆ ಬರಬಹುದು.
- ಭೌತವಿಜ್ಞಾನ: ಬೆಳಕು ಪಾಠದ ಪೀನ ಮಸೂರ ಮತ್ತು ನಿಮ್ನ ದರ್ಪಣದ ರೇಖಾಚಿತ್ರಗಳು (ಒಟ್ಟು 8 ಚಿತ್ರಗಳಲ್ಲಿ ಒಂದು ಕಡ್ಡಾಯ), ಓಮನ ನಿಯಮದ ಮಂಡಲ ಚಿತ್ರ ಮತ್ತು ಕಾಂತೀಯ ಬಲರೇಖೆಗಳ ಚಿತ್ರಗಳ ಮೇಲೆ ಹಿಡಿತವಿರಲಿ.
ಉತ್ತರಿಸುವ ಶೈಲಿ ಹೇಗಿರಲಿ?
- ಒಂದು ಅಂಕ: ನಿಯಮಗಳಿದ್ದರೆ ಸಂಪೂರ್ಣವಾಗಿ ಬರೆಯಿರಿ, ಉಳಿದಂತೆ ನೇರವಾದ ಪೂರ್ಣ ವಾಕ್ಯದ ಉತ್ತರವಿರಲಿ.
- ಗುರುತು ಹಾಕುವಿಕೆ: 3 ಅಂಕದ ಪ್ರಶ್ನೆಗಳಲ್ಲಿ ಪ್ರಮುಖ ಪದಗಳ ಅಡಿಯಲ್ಲಿ ಗೆರೆ ಎಳೆಯಿರಿ (Underline).
- ವ್ಯತ್ಯಾಸಗಳು: ಯಾವುದೇ ಎರಡು ವಿಷಯಗಳ ನಡುವಿನ ವ್ಯತ್ಯಾಸ ಕೇಳಿದಾಗ ಕಡ್ಡಾಯವಾಗಿ ಕೋಷ್ಟಕ (Table) ಹಾಕಿ ಉತ್ತರಿಸಿ.
- ಆಯ್ಕೆ ಪ್ರಶ್ನೆಗಳು: 4 ಅಥವಾ 5 ಅಂಕದ ಪ್ರಶ್ನೆಗಳಲ್ಲಿ ಎರಡನ್ನೂ ಉತ್ತರಿಸಿದಲ್ಲಿ, ಯಾವ ಉತ್ತರಕ್ಕೆ ಹೆಚ್ಚು ಅಂಕ ಸಿಗುತ್ತದೋ ಅದನ್ನು ಪರಿಗಣಿಸಲಾಗುತ್ತದೆ.
ವಿಭಾಗವಾರು ಪ್ರಮುಖ ಅಂಶಗಳು
- ಜೀವವಿಜ್ಞಾನ: ಜೀರ್ಣಕ್ರಿಯೆಯ ಕಿಣ್ವಗಳು, ರಕ್ತನಾಳಗಳ ವ್ಯತ್ಯಾಸ, ಸಸ್ಯ ಹಾರ್ಮೋನ್‌ಗಳು ಮತ್ತು ಮಾನವನ ಲಿಂಗ ನಿರ್ಧಾರ ಪ್ರಕ್ರಿಯೆಯನ್ನು ಚೆನ್ನಾಗಿ ಓದಿಕೊಳ್ಳಿ. ಸಂತಾನೋತ್ಪತ್ತಿ ಪಾಠದಿಂದ 5 ಅಂಕದ ಪ್ರಶ್ನೆ ಬರುವ ಸಾಧ್ಯತೆ ಹೆಚ್ಚಿದೆ.
- ರಸಾಯನವಿಜ್ಞಾನ: ರಾಸಾಯನಿಕ ಸಮೀಕರಣಗಳನ್ನು ಸರಿದೂಗಿಸುವುದು, ಲೋಹಗಳ ಉದ್ಧರಣೆ, pH ಮೌಲ್ಯದ ಅನ್ವಯಿಕ ಪ್ರಶ್ನೆಗಳು ಹಾಗೂ ಸಾಬೂನಿನ ಸ್ವಚ್ಛಗೊಳಿಸುವ ಪ್ರಕ್ರಿಯೆಯ ಬಗ್ಗೆ ಗಮನಹರಿಸಿ.
- ಭೌತವಿಜ್ಞಾನ: ವಿದ್ಯುತ್ ಬಿಲ್ ಲೆಕ್ಕಾಚಾರ, ರೋಧಶೀಲತೆ (Resistivity) ಮೇಲಿನ ಲೆಕ್ಕಗಳು, ಫ್ಲೆಮಿಂಗ್ ನಿಯಮಗಳು ಹಾಗೂ ಮಸೂರದ ಸಾಮರ್ಥ್ಯದ ಸೂತ್ರಗಳನ್ನು ಮರೆಯಬೇಡಿ.
- ಪರಿಸರ ವಿಜ್ಞಾನ: ಒಜೋನ್ ಪದರ ಸವಕಳಿ ಮತ್ತು ಜೈವಿಕ ವಿಘಟನೆಯಾಗದ ತ್ಯಾಜ್ಯಗಳ ವಿಲೇವಾರಿ ಕುರಿತಾದ 3 ಅಂಕದ ಪ್ರಶ್ನೆಗಳು ಗ್ಯಾರಂಟಿ.
ಪ್ರತಿ ಪಾಠದ ಕೊನೆಯಲ್ಲಿರುವ ಸಾರಾಂಶದ ಮೇಲೆ ಒತ್ತು ನೀಡಿದರೆ ಯಾವುದೇ ಅನ್ವಯಿಕ ಪ್ರಶ್ನೆಗಳನ್ನು ಸುಲಭವಾಗಿ ಎದುರಿಸಬಹುದು. ತಾಳ್ಮೆ ಮತ್ತು ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ಶಿಕ್ಷಕಿ ನವ್ಯಾ ತಿಳಿಸಿದ್ದಾರೆ.













