
ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಕೆಯಲ್ಲಿ ಆಸಕ್ತಿ ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳುವಲ್ಲಿ ಪ್ರಾರಂಭವಾದ ಸಂಸ್ಥೆಯ ನೂತನ ಪರಿಕಲ್ಪನೆಯಾದ ಸ್ಫೂರ್ತಿ ಮಾತು-11 ಸರಣಿ ಕಾರ್ಯಕ್ರಮವು ‘ನಿಮಗೆ ನೀವೇ ಕನ್ನಡಿಯಾಗಿ’ ಎಂಬ ಶೀರ್ಷಿಕೆಯಡಿಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯದ ಅಸಿಸ್ಟೆಂಟ್ ಪ್ರೊಫೆಸರಾದ ಡಾ. ಅನುರಾಧ ಕುರುಂಜಿ ನಡೆಸಿಕೊಟ್ಟರು.

“ತಂದೆ ತಾಯಿ ಮತ್ತುಗುರುಗಳಿಗೆ ಗೌರವ ನೀಡಿ ಓದಿನಲ್ಲಿ ಕಠಿಣ ಶ್ರಮವನ್ನು ಹಾಕಿದ್ದಲ್ಲಿ ಖಂಡಿತ ಉತ್ತುಂಗ ಮಟ್ಟಕ್ಕೆ ಏರಬಹುದು. ಸಿಕ್ಕ ಅವಕಾಶವನ್ನು ಬಾಚಿಕೊಳ್ಳುವವನೇ ಜಾಣ. ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಪ್ರತಿಕ್ಷಣವೂ ಕೂಡ ಅಮೂಲ್ಯವಾದದ್ದು, ಋಣಾತ್ಮಕ ಚಿಂತನೆಯನ್ನು ಬಿಟ್ಟು ಧನಾತ್ಮಕವಾಗಿ ಆಲೋಚಿಸಿದಾಗ ನಮ್ಮ ಪ್ರಗತಿ ಸಾಧ್ಯ.” ಎಂದು ವಿದ್ಯಾರ್ಥಿಗಳೊಂದಿಗೆ ಗಾದೆ, ಮನೋರಂಜನೆಯ ಆಟಗಳ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಸಂಸ್ಥಾಪಕರು ಹಾಗೂ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಹಾಗೂ ಸಹ ಸಂಸ್ಥಾಪಕರಲ್ಲಿ ಓರ್ವರಾದ ಶ್ರೀ ಆದರ್ಶ ಎಂ.ಕೆ. ಮತ್ತು ಉಪನ್ಯಾಸಕ ವರ್ಗ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಡಾ. ಅನುರಾಧಾ ಕುರುಂಜಿಯವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಕೃತ ಭಾಷಾ ಉಪನ್ಯಾಸಕಿಯಾದ ಡಾ. ಸೌಂದರ್ಯ ಲಕ್ಷ್ಮೀ ನಿರ್ವಹಿಸಿದರು.