
ಹೊಸದಿಲ್ಲಿ: ಪಾಕಿಸ್ತಾನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ “ಆಪರೇಷನ್ ಸಿಂದೂರ” ಬಳಿಕ ದೇಶದಲ್ಲಿ ಭವಿಷ್ಯದ ದಾಳಿಗಳ ಕುರಿತ ಊಹಾಪೋಹಗಳು ಹೆಚ್ಚಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಿನ ಕ್ರಮಕ್ಕೆ ಸಜ್ಜಾಗುತ್ತಿದೆ ಎಂಬ ಸಂದೇಶ ಹಲವಾರು ರಾಜಕೀಯ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ.
ಮಂಗಳವಾರ ತಡರಾತ್ರಿ ನಡೆದ ದಾಳಿಯ ನಂತರ ಬುಧವಾರ ಮೋದಿ ಅವರು ತುರ್ತು ಸಂಪುಟ ಸಭೆ ನಡೆಸಿದರೆ, ಗುರುವಾರ ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಸಭೆ ದಾಳಿಯ ವಿವರ ಹಂಚಿಕೊಳ್ಳಲು ಕರೆಯಲ್ಪಟ್ಟಿದ್ದರೂ, ಮುಂದಿನ ತೀರ್ಮಾನಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳೂ ಇದ್ದವೆಂದು ಮೂಲಗಳು ತಿಳಿಸಿವೆ.
ವಿಪಕ್ಷಗಳೂ ಕೂಡ ಕೇಂದ್ರದ ಕ್ರಮಕ್ಕೆ ಬೆಂಬಲ ನೀಡಿರುವುದಾಗಿ ಬಹುಮತಪೂರ್ಣವಾಗಿ ಘೋಷಿಸಿವೆ. ಇದರಿಂದ ಕೇಂದ್ರ ಸರ್ಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ರಾಜಕೀಯವಾಗಿ ಬಲಿಷ್ಠ ಸ್ಥಿತಿಯಲ್ಲಿದೆ.
ಇದೇ ಸಂದರ್ಭದಲ್ಲಿ, ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ನರವಣೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಹಲವರು“ಯೇ ತೋ ಅಭೀ ಟ್ರೈಲರ್ ಹೈ, ಪಿಕ್ಚರ್ ಅಭೀ ಬಾಕೀ ಹೈ’ (“ಇದು ಕೇವಲ ಟ್ರೈಲರ್, ಸಿನಿಮಾ ಇನ್ನೂ ಬಾಕಿ ಇದೆ”) ಎಂದು ಹೇಳಿಕೆ ನೀಡಿದ್ದು, “ಆಪರೇಷನ್ ಸಿಂದೂರ 2” ನ ನಿರೀಕ್ಷೆಯನ್ನು ಬಲಪಡಿಸಿದೆ.
ಇತ್ತ ಪಾಕಿಸ್ತಾನ ಪ್ರಧಾನಿ, ಸೇನೆಯು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಮುಕ್ತವಾಗಿದೆ ಎಂದು ಘೋಷಣೆ ನೀಡಿದರೆ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ “ನಮ್ಮನ್ನು ತೊಂದರೆಗೊಳಪಡಿಸಿದರೆ ಕಠಿಣ ಪ್ರತಿರೋಧ ಎದುರಿಸಬೇಕಾಗುತ್ತದೆ.” ಎಂದು ಪಾಕಿಸ್ತಾನಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಈ ಎಲ್ಲ ರಾಜಕೀಯ ಮತ್ತು ಸೇನಾ ಬೆಳವಣಿಗೆಗಳ ಮಧ್ಯೆ, ಇನ್ನೊಂದು ದಾಳಿ ಸಾಧ್ಯತೆ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿವೆ.