

ಮಂಗಳೂರು: ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ಸೌಹಾರ್ದವನ್ನು ಉತ್ತೇಜಿಸಿದ್ದಾರೆ. ಅವರು ನದಿಗೆ ಇಳಿದು ಪವಿತ್ರ ನೀರನ್ನು ಚಿಮುಕಿಸಿಕೊಂಡು, ದೋಣಿ ವಿಹಾರ ನಡೆಸಿ ಮಹಾಕುಂಭದ ಸೊಬಗನ್ನು ಅನುಭವಿಸಿದರು.
ಉತ್ತರಪ್ರದೇಶದ ಸಭಾಧ್ಯಕ್ಷ ಸತೀಶ್ ಮಹಾನಾ ಅವರ ಆಹ್ವಾನದ ಮೇರೆಗೆ ಖಾದರ್, ನಾಗಾಸಾಧುಗಳು ಮತ್ತು ಅಘೋರಿಗಳೊಂದಿಗೆ ಆಧ್ಯಾತ್ಮಿಕತೆ ಕುರಿತು ಮಾಹಿತಿ ಪಡೆದುಕೊಂಡರು. ನಂತರ, ಅವರು ಅಲಹಾಬಾದ್‌ನಲ್ಲಿ ಹಜರತ್ ಮಖ್ದೂಮ್ ಸಾದತ್ ಚೌಧೋನ್ ಪೀರೋ ದರ್ಗಾ ಶರೀಫ್‌ಗೆ ಭೇಟಿ ನೀಡಿ, ರಾಜ್ಯದ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
“ನಾನು ಮತ್ತು ನನ್ನ ಸ್ನೇಹಿತರು ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದು ತುಂಬಾ ಸಂತೋಷವಾಗಿದೆ. ಈ ಅನುಭವವು ದೇಶದ ವಿವಿಧ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಲು ವಿಶೇಷ ಅವಕಾಶ ನೀಡಿತು. ಇದು ವಿಶ್ವಾಸಭರಿತ ಸಮಾಜವನ್ನು ನಿರ್ಮಿಸಲು ಸಹಾಯಕವಾಗುತ್ತದೆ.” ಎಂದು ಖಾದರ್ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.