
ಬೆಂಗಳೂರು : ಬಿಜೆಪಿಯ ಹದಿನೆಂಟು ಶಾಸಕರ ಅಮಾನತಿನ ನಂತರ, ಇದೀಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರೂ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಎದುರಿಸುತ್ತಿದ್ದಾರೆ. ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಧರ್ಮಾಧಾರಿತ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಅವರು ಕಠಿಣ ರಾಜಕೀಯ ಬಿಕ್ಕಟ್ಟಿನೊಳಗೆ ಸಿಲುಕಿದ್ದಾರೆ.
ಮಾರ್ಚ್ ತಿಂಗಳ ಅಧಿವೇಶನದಲ್ಲಿ ಅಮಾನತಿಗೊಳಗಾದ 18 ಬಿಜೆಪಿ ಶಾಸಕರ ಕುರಿತು ಪಕ್ಷ ಇನ್ನೂ ಹೋರಾಟ ಮುಂದುವರಿಸುತ್ತಿದ್ದಂತೆಯೇ, ಹರೀಶ್ ಪೂಂಜಾ ನೀಡಿದ “ಸ್ಪೀಕರ್ ಮುಸ್ಲಿಂ” ಎಂಬ ಹೇಳಿಕೆ ಮತ್ತೊಂದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅವರು ತಮ್ಮ ಶಾಸಕರ ಹುದ್ದೆಯಿಂದ ವಜಾಗೊಳ್ಳಬೇಕು ಎಂದು ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.
ಈ ಕುರಿತು ಹಕ್ಕುಬಾಧ್ಯತಾ ಸಮಿತಿ ಅಧ್ಯಕ್ಷ ಮಹಾಂತೇಶ ಕೌಜಲಗಿ ಪರಿಶೀಲನೆ ನಡೆಸಲಿದ್ದು, ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಇದೀಗ ಸ್ಪೀಕರ್ ಯು.ಟಿ. ಖಾದರ್ ಅವರು ಈ ವಿಚಾರದಲ್ಲಿ ಏನೆಂಬ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದರತ್ತ ಎಲ್ಲರ ಕಣ್ಣು ಹರಿದಿದೆ.