
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗುಲಿ, ತಮ್ಮ ಮುಂದಿನ ಗುರಿಯಾಗಿ ಟೀಮ್ ಇಂಡಿಯಾದ ಪ್ರಧಾನ ಕೋಚ್ ಹುದ್ದೆಯನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಅವರು ರಾಜಕೀಯಕ್ಕೆ ಪ್ರವೇಶಿಸುವ ಆಲೋಚನೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಕೋಲ್ಕತಾದಲ್ಲಿ ಪಿಟಿಐ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಗಂಗುಲಿ, “ನಾನು ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಕೋಚಿಂಗ್ ಬಗ್ಗೆ ಹಿಂದೆ ಯೋಚನೆ ಮಾಡಿರಲಿಲ್ಲ. ಆದರೆ ಇನ್ನು ಮುಂದೇನು ಆಗುತ್ತದೆ ಎಂಬುದನ್ನು ನೋಡೋಣ” ಎಂದು ಹೇಳಿದರು.
2018 ರಿಂದ 2024ರ ತನಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವರು, ಕ್ರಿಕೆಟ್ ಆಡಳಿತ ಮತ್ತು ತರಬೇತಿ ಎರಡರಲ್ಲಿಯೂ ತನ್ನ ಅನುಭವವನ್ನು ಹಂಚಿಕೊಂಡರು. “ಬಿಸಿಸಿಐ ಅಧ್ಯಕ್ಷನಾಗಿ ನಾನು ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ, ಅದು ನನಗೆ ಹೆಮ್ಮೆಯ ವಿಷಯ ” ಎಂದು ಅವರು ಹೇಳಿದರು.
ರಾಜಕೀಯ ಪ್ರವೇಶದ ಬಗ್ಗೆ ಕೇಳಿದಾಗ, “ನನಗೆ ರಾಜಕೀಯದ ಆಸಕ್ತಿ ಇಲ್ಲ. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಆಗುವ ಸಾಧ್ಯತೆಯಲ್ಲೂ ನಾನು ಆಸಕ್ತಿ ತೋರಿಲ್ಲ,” ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಗಂಗುಲಿ ಪ್ರಸ್ತುತ ಭಾರತೀಯ ಕೋಚ್ ಗೌತಮ್ ಗಂಭೀರ್ ಅವರ ಕಾರ್ಯನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಗಂಭೀರ್ ಚೆನ್ನಾಗಿ ನಡೆಸುತ್ತಿದ್ದಾರೆ. ಇತ್ತೀಚಿನ ಸರಣಿಗಳಲ್ಲಿ ಅವರು ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ,” ಎಂದರು.