
ಅಹಮದಾಬಾದ್: ಬೆಳ್ಳಿತೆರೆಯ ವಿಲನ್, ರಿಯಲ್ ಲೈಫ್ ಹೀರೋ ಎಂದೇ ಖ್ಯಾತರಾಗಿರುವ ಬಾಲಿವುಡ್ ನಟ ಸೋನು ಸೂದ್ ತಮ್ಮ ಉದಾರ ಮನೋಭಾವದಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅಸಹಾಯಕ ಮನುಷ್ಯರ ಕಣ್ಣೀರು ಒರೆಸುತ್ತಿದ್ದ ಈ ಮಾನವತಾವಾದಿ, ಈಗ ಮೂಕಪ್ರಾಣಿಗಳ ಆಸರೆಗೆ ನಿಂತಿದ್ದು, ಗುಜರಾತ್‌ನ ಗೋಶಾಲೆಯೊಂದಕ್ಕೆ ಬರೋಬ್ಬರಿ 22 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಪ್ರಾಣಿ ಪ್ರೇಮ ಮೆರೆದಿದ್ದಾರೆ.
ಗುಜರಾತ್‌ನ ವಾರಾಹಿಯಲ್ಲಿರುವ ಬೃಹತ್ ಗೋಶಾಲೆಯಲ್ಲಿ ಸುಮಾರು 7,000 ಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ. ವಿಶೇಷವಾಗಿ ರಸ್ತೆ ಬದಿಯಲ್ಲಿ ಗಾಯಗೊಂಡ, ಅಂಗವೈಕಲ್ಯಕ್ಕೊಳಗಾದ ಮತ್ತು ಅನಾಥವಾದ ಹಸುಗಳನ್ನು ಇಲ್ಲಿ ಅತ್ಯಂತ ಪ್ರೀತಿಯಿಂದ ಆರೈಕೆ ಮಾಡಲಾಗುತ್ತಿದೆ. ಇತ್ತೀಚೆಗೆ ಈ ಗೋಶಾಲೆಗೆ ಭೇಟಿ ನೀಡಿದ್ದ ಸೋನು ಸೂದ್, ಅಲ್ಲಿನ ವ್ಯವಸ್ಥೆ ಮತ್ತು ಗೋಸೇವೆಯನ್ನು ಕಂಡು ಮನಸೋತಿದ್ದರು. ಈ ಸೇವೆಯನ್ನು ಶ್ಲಾಘಿಸಿರುವ ಅವರು, ತಮ್ಮ ವೈಯಕ್ತಿಕ ನೆಲೆಯಲ್ಲಿ ಈ ಬೃಹತ್ ಮೊತ್ತದ ಆರ್ಥಿಕ ನೆರವು ಹಸ್ತಾಂತರಿಸಿದ್ದಾರೆ.
ಕೋವಿಡ್ ಸಂಕಷ್ಟದ ಕಾಲದಲ್ಲಿ ಸಾವಿರಾರು ವಲಸೆ ಕಾರ್ಮಿಕರನ್ನು ಅವರ ಮನೆಗೆ ತಲುಪಿಸುವ ಮೂಲಕ ದೇಶಾದ್ಯಂತ ‘ಜನಪ್ರಿಯ ನಾಯಕ’ನಾಗಿ ಹೊರಹೊಮ್ಮಿದ್ದ ಸೋನು ಸೂದ್, ನಂತರ ಆಕ್ಸಿಜನ್ ಪೂರೈಕೆ, ಬಡವರಿಗೆ ಶಿಕ್ಷಣ ಮತ್ತು ವೈದ್ಯಕೀಯ ನೆರವಿನ ಮೂಲಕ ಸಮಾಜ ಸೇವೆಯನ್ನು ಮುಂದುವರಿಸಿದ್ದಾರೆ. “ಇಲ್ಲಿ ನಡೆಯುತ್ತಿರುವ ಗೋಸೇವಾ ಕಾರ್ಯ ವಿಧಾನವು ಇಡೀ ಭಾರತಕ್ಕೆ ಮಾದರಿಯಾಗಬೇಕು” ಎಂದು ಅಭಿಪ್ರಾಯಪಟ್ಟಿರುವ ಅವರು, ಗೋವುಗಳೊಂದಿಗೆ ಸಮಯ ಕಳೆದಿರುವ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.



































