
ಮಂಗಳೂರು: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿಯಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ, ಮಗನೊಬ್ಬ ತನ್ನ ತಾಯಿಯನ್ನು ಕೊಂದು ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ಭಾನುವಾರ ತಡರಾತ್ರಿಯಲ್ಲಿ ನಡೆದಿದೆ. ತಾಯಿಯನ್ನು ಹತ್ಯೆಗೈದು ಸುಟ್ಟುಹಾಕಿದ ಆರೋಪದಡಿ ಮಂಜೇಶ್ವರ ಪೊಲೀಸರು ಯುವಕನನ್ನು ಕುಂದಾಪುರದಲ್ಲಿ ಬಂಧಿಸಿದ್ದಾರೆ.
ಮೃತಳಾದವರು ನಲ್ಲೆಂಗಿ ಪದವುವಾಸಿ ಹಿಲ್ಡಾ ಮೊಂಟೆರೊ (59). ಈಕೆಯ ಮಗ ಮೆಲ್ವಿನ್ ಮೊಂಟೆರೊ (26) ಕೊಲೆಕೃತ್ಯ ಎಸಗಿರುವ ಆರೋಪಿ. ತಡರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ, ಹಿಲ್ಡಾ ಮಲಗಿದ್ದಾಗ ಹಲ್ಲೆ ಮಾಡಿ ಕೊಂದು, ಮೃತದೇಹವನ್ನು ಮನೆಯ ಹಿಂದಿನ ಭಾಗಕ್ಕೆ ಕೊಂಡೊಯ್ದು ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ.
ಕೃತ್ಯದ ನಂತರ, ಆರೋಪಿ ಮೆಲ್ವಿನ್ ತನ್ನ ನೆರೆಮನೆಯ ಸಂಬಂಧಿಕ ಲೋಲಿಟಾ (30) ಅವರ ಬಳಿ ಹೋಗಿ “ತಾಯಿ ಕಾಣುತ್ತಿಲ್ಲ” ಎಂಬ ನೆಪದೊಂದಿಗೆ ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದ. ಮನೆಗೆ ಹಿಂತಿರುಗುತ್ತಿದ್ದ ಲೋಲಿಟಾ ಅವರ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದನು. ಗಂಭೀರವಾಗಿ ಸುಟ್ಟು ಗಾಯಗೊಂಡ ಲೋಲಿಟಾ ಅವರ ಬೊಬ್ಬೆ ಕೇಳಿ ನೆರೆಹೊರೆಯವರು ಧಾವಿಸಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಹರ್ಷಾದ್ ವರ್ಕಾಡಿ ತಿಳಿಸಿದ್ದಾರೆ.
ಕೊಲೆ ಎಸಗಿದ ಬಳಿಕ ಮೆಲ್ವಿನ್ ಮಜಿರ್ಪಳ್ಳವರೆಗೆ ನಡೆದು ಹೋಗಿ, ಅಲ್ಲಿಂದ ಆಟೋ ಹಿಡಿದು ಹೊಸಂಗಡಿಗೆ ತೆರಳಿದ್ದ. ಬಳಿಕ ಮಂಗಳೂರು ಮೂಲಕ ಮೂರು ಬಸ್ ಬದಲಾಯಿಸಿ ಕುಂದಾಪುರಕ್ಕೆ ತಲುಪಿದ್ದನು. ಕುಂದಾಪುರದಲ್ಲಿ ಸ್ನಾನ ಮಾಡಿ ಮದ್ಯದ ಬಾಟಲಿ ಖರೀದಿಸಿ ಮತ್ತೆ ಆಟೋದಲ್ಲಿ ಕೋರೆ ಕಡೆಗೆ ಹೋಗಿದ್ದ. ಪೊಲೀಸರು ಆತನ ಮೊಬೈಲ್ ಲೊಕೇಶನ್ ಆಧರಿಸಿ ಬೆನ್ನು ಹತ್ತಿ, ಕೋರೆ ಬಳಿಯ ಅರಣ್ಯ ಪ್ರದೇಶದಲ್ಲಿ ಆರೋಪಿ ಮೆಲ್ವಿನ್ ಮೊಂಟೆರೊ ಅವರನ್ನು ಬಂಧಿಸಿದರು.
ಮೃತ ಹಿಲ್ಡಾ ಅವರ ಪತಿ ಲೂಯಿಸ್ ಮೊಂಟೆರೊ ಐದು ವರ್ಷಗಳ ಹಿಂದೆ ನಿಧನರಾಗಿದ್ದರು. ಹಿರಿಯ ಪುತ್ರ ಆಲ್ವಿನ್ ವಿದೇಶದಲ್ಲಿದ್ದಾನೆ. ಮದುವೆಯಾಗದ ಮೆಲ್ವಿನ್ ತಾಯಿಯ ಜೊತೆ ನಲ್ಲೆಂಗಿಯಲ್ಲಿ ವಾಸಿಸುತ್ತಿದ್ದ. ಕೆಂಪು ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಮೆಲ್ವಿನ್, ಮದ್ಯ ಸೇವನೆಯ ಚಟಕ್ಕೆ ಒಳಗಾಗಿದ್ದ. ಈ ದುಷ್ಟ ಕೃತ್ಯ ಮದ್ಯದ ನಶೆಯಲ್ಲಿ ನಡೆದಿದೆಯೋ ಅಥವಾ ಇತರೆ ಕಾರಣವೋ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಭೀಕರ ಕೊಲೆಯು ಸ್ಥಳೀಯವಾಗಿ ಆತಂಕ ಹುಟ್ಟಿಸಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.