
ಸಹರಾನ್‌ಪುರ : ಸಹರಾನ್‌ಪುರದಲ್ಲಿ ನೇಹಾ ಎಂಬ ಯುವತಿಯು ಪತಿ ಪ್ರಶಾಂತ್ ಕೈಯಿಂದ ಕೊಲೆಯಾಗಿದ್ದಾಳೆ. ನೇಹಾ ತನ್ನ ತಾಯಿಯ ಮನೆಯಲ್ಲಿ ಒಬ್ಬಳೇ ಇದ್ದಾಗ ಪತಿ ಪ್ರಶಾಂತ್ ಚಾಕುವಿನಿಂದ ಇರಿದು ಆಕೆಯನ್ನು ಹತ್ಯೆಗೈದಿದ್ದಾನೆ. ನಂತರ ಆತ ತನ್ನ ಅತ್ತೆಗೆ ಫೋನ್ ಮಾಡಿ “ನಾನು ಅವಳನ್ನು ಕೊಂದೆ, ಈಗ ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ” ಎಂದು ತಿಳಿಸಿದ್ದಾನೆ.
ಮದುವೆಯಾದ ದಿನದಿಂದಲೇ ಶಂಕೆಪಡುವ ನಡವಳಿಕೆಯಿಂದ ನೇಹಾ ಪರಿತಪಿಸುತ್ತಿದ್ದರು. ಆರೋಪಿ ಪ್ರಶಾಂತ್ ಆಕೆಯ ಮೇಲೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನ ಪಡುತ್ತಿದ್ದ. ಈ ಕಾರಣದಿಂದ ನಿರಂತರ ಜಗಳವಾಡುತ್ತಿದ್ದ ಪ್ರಶಾಂತ್, ಕೊನೆಗೆ ನೇಹಾಳನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ನೇಹಾ ತನ್ನ ತಾಯಿಯ ಬಾಡಿಗೆ ಮನೆಯಲ್ಲಿ ವಾಸವಿದ್ದು, ಹತ್ಯೆಗೆ 20 ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.
ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿ ಪ್ರಶಾಂತ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಕೊಲೆಗೆ ಬಳಸಿದ ಚಾಕುವನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.