ಉಡುಪಿ: ಸೋದೆ ಮಠದ ಪೀಠಾಧಿಪತಿ ಶ್ರೀ ಶ್ರೀಪಾದರು ವಿಶ್ವ ವಲ್ಲಭತೀರ್ಥ ಸ್ವಾಮೀಜಿ ಅವರು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದರು. ಲಕ್ಷಾಂತರ ಭಕ್ತರು ಜಮುನಾ, ಗಂಗಾ, ಸರಸ್ವತಿ ನದಿಗಳ ಸಂಗಮದಲ್ಲಿ ಕುಂಭಸ್ನಾನ ಮಾಡುತ್ತಿರುವ ಈ ಮಹಾಕುಂಭ ಮೇಳದಲ್ಲಿ, ಶ್ರೀಪಾದರು ಸಹ ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿದರು.
ಪ್ರಯಾಗರಾಜ್ ಎಂಬುದು ಪುರಾತನ ಕಾಲದಿಂದಲೇ ಪವಿತ್ರ ಕ್ಷೇತ್ರವಾಗಿದ್ದು,ಕೋಟ್ಯಾಂತರ ಭಕ್ತರು ಮತ್ತು ಯತಿಗಳು ಇಲ್ಲಿ ಕುಂಭಮೇಳದಲ್ಲಿ ಭಾಗವಹಿಸುತ್ತಾರೆ. ಈ ತೀರ್ಥಸ್ಥಳದ ಮಹಿಮೆ ಎಲ್ಲಾ ಪುರಾಣಗಳಲ್ಲಿ ಉಲ್ಲೇಖಿತವಾಗಿದೆ ಎಂದು ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ. ಮಹಾಕುಂಭ ಮೇಳದ ವ್ಯವಸ್ಥೆಗಳು ಸುಗಮವಾಗಿದ್ದು, ಭಕ್ತರಿಗಾಗಿ ಎಲ್ಲಾ ಅನುಕೂಲತೆಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಪವಿತ್ರ ಕ್ಷಣದಲ್ಲಿ ಸ್ನಾನ ಮಾಡುವುದರಿಂದ ಅಪಾರ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ ಎಂದು ಅವರು ಹೇಳಿದರು.