
ಉಡುಪಿ: ನಿಟ್ಟೂರಿನಲ್ಲಿ ಮಲಮೂತ್ರಾದಿಗಳ ನಡುವೆಯೇ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ವೃದ್ಧ ತಾಯಿ ಹಾಗೂ ಮಾನಸಿಕ ಅಸ್ವಸ್ಥ ಮಗನನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾಯಿ ಕಮಲ ಶೆಟ್ಟಿ (80) ಅವರು ವೃದ್ದಾಪ್ಯ ದೆಸೆಯಿಂದ ಹಾಸಿಗೆ ಹಿಡಿದಿದ್ದು ಮಲಗಿದ್ದಲ್ಲಿಯೇ ಮಲ ಮೂತ್ರಾದಿಗಳನ್ನು ಮಾಡುತ್ತಿದ್ದರೆ, ಮಗ ಅನಿಲ್ ಶೆಟ್ಟಿ (51) ಮಾನಸಿಕ ಅಸ್ವಸ್ಥನಾಗಿ ತಾಯಿ ಬಳಿ ಕುಳಿತಿರುತ್ತಿದ್ದ.ಮನೆಯಲ್ಲಿ ತ್ಯಾಜ್ಯ, ಮಲ ಮೂತ್ರಾದಿಗಳ ದುರ್ವಾಸನೆ ಹರಡಿ ಮನುಷ್ಯರು ವಾಸ ಮಾಡುವುದು ಬಿಡಿ, ಒಂದು ಕ್ಷಣ ನಿಲ್ಲಲು ಸಾದ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ತಾಯಿ ಮಗನ ಈ ದುರವಸ್ಥೆಯನ್ನು ಕಂಡು ನೆರೆ ಮನೆಯ ಲೀಲಾ ಪೂಜಾರಿ ಎಂಬವರು ಆಗಾಗ್ಗೆ ಅಹಾರ ನೀಡುತ್ತಿದ್ದರು.ಈ ಕುಟುಂಬದ ದುರಂತ ಕಥೆಯನ್ನು ಸ್ಥಳೀಯರಾದ ಪ್ರಸಾದ್ ಶೆಟ್ಟಿ ಅವರು ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿ ರಕ್ಷಿಸುವಂತೆ ಮನವಿ ಮಾಡಿದ್ದಾರೆ.ಅದರಂತೆ ಆಂಬುಲೆನ್ಸ್ ತೆಗೆದುಕೊಂಡು ಹೋದ ವಿಶು ಶೆಟ್ಟಿ ಅವರು ಈ ಅಮ್ಮ ಮಗನ ಪರಿಸ್ಥಿತಿ ಕಂಡು ದಂಗಾದರು.ತಕ್ಷಣ ವೃದ್ದೆ ಕಮಲ ಶೆಟ್ಟಿ ಅವರನ್ನು ಶುಚಿ ಗೊಳಿಸಿ ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೆ, ಮಾನಸಿಕ ಅಸ್ವಸ್ಥ ಮಗ ಅನಿಲ್ ಶೆಟ್ಟಿಯನ್ನು ಪುನರ್ವಸತಿ ಹಾಗೂ ಚಿಕಿತ್ಸೆಗಾಗಿ ಡಾ.ಶಶಿಕಿರಣ್ ಶೆಟ್ಟಿ ಅವರು ನಡೆಸುವ ಕೊಳಲಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ .ಮಗ ಅನಿಲ್ ಶೆಟ್ಟಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಉತ್ತಮ ವ್ಯಕ್ತಿಯಾಗಿದ್ದರು. ಇವರಿಗೆ ಮದುವೆಯಾಗಿ ಪತ್ನಿ ವಿಚ್ಛೇದನ ಪಡೆದಿದ್ದರು. ಈ ಎಲ್ಲಾ ಕೌಟುಂಬಿಕ ಕಾರಣದಿಂದ ಅವರು ಮಾನಸಿಕ ಅಸ್ವಸ್ಥರಾದರು ಎಂಬ ಮಾಹಿತಿ ಲಭಿಸಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.
ಸಂಬಂಧಿಕರು ಜಿಲ್ಲಾಸ್ಪತ್ರೆ ಹಾಗೂ ಸ್ವರ್ಗ ಆಶ್ರಮವನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಪ್ರಸಾದ್ ಶೆಟ್ಟಿ ನಿಟ್ಟೂರು ಹಾಗೂ ಉದ್ಯಾವರ ರಾಮದಾಸ್ ಪಾಲನ್ ಸಹಕರಿಸಿದ್ದರು. ಉಡುಪಿಯಂತಹ ಪ್ರಜ್ಞಾವಂತರ ನಾಡಿನಲ್ಲಿ ನಡೆದಿರುವ ಈ ಘಟನೆ ಜಿಲ್ಲೆಗೆ ಅವಮಾನ ಎಂದು ವಿಶು ಶೆಟ್ಟಿ ವಿಶಾದ ವ್ಯಕ್ತ ಪಡಿಸಿದ್ದಾರೆ.