
ಬೆಂಗಳೂರು : ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಮೂಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ವಿರುದ್ಧ ಲಂಚದ ಗಂಭೀರ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆ ಹಾಗೂ ಆಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಮೂಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರು ತಮ್ಮ ಬಡ್ತಿಗಾಗಿ ಮುಖ್ಯ ಕಾರ್ಯದರ್ಶಿಯವರಿಗೆ ಕೋಟ್ಯಂತರ ರೂಪಾಯಿ ಲಂಚ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ನಟೇಶ್ ಅವರು ಸಿಸಿಬಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ನನ್ನದಲ್ಲದ ಧ್ವನಿಯನ್ನು ಸೃಷ್ಟಿಸಿ ಸುಳ್ಳು ದಾಖಲೆಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ದೂರಿನ ಅನ್ವಯ 1, 2, 3 ಹಾಗೂ ಐಟಿ ಆ್ಯಕ್ಟ್‌ನ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿದ ಸಿಸಿಬಿ ಅಧಿಕಾರಿಗಳು, ಮೈಸೂರಿನಲ್ಲಿರುವ ಕೃಷ್ಣ ಅವರ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸುದೀರ್ಘ ವಿಚಾರಣೆಯ ನಂತರ ಆರೋಪಿಯನ್ನು ಅಧಿಕೃತವಾಗಿ ಬಂಧಿಸಲಾಗಿದೆ ಎಂದು ಸಿಸಿಬಿ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.



































