
ಪಂಜಾಬ್: ಮಾನವೀಯತೆ ತಲೆತಗ್ಗಿಸುವಂತಹ ಘಟನೆಯೊಂದು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ನಡೆದಿದೆ. ಓರ್ವ ವ್ಯಕ್ತಿ ನಿದ್ರೆಯಲ್ಲಿದ್ದ ಮುಗ್ಧ ನಾಯಿಯೊಂದಕ್ಕೆ ಗುಂಡಿಕ್ಕಿ, ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಈ ಕೃತ್ಯದ ಸಂಪೂರ್ಣ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಡಬಲ್ ಬ್ಯಾರೆಲ್ ಗನ್ ಹಿಡಿದ ವ್ಯಕ್ತಿಯೊಬ್ಬ ಮಲಗಿದ್ದ ನಾಯಿಯತ್ತ ಗುರಿಯಿಟ್ಟು ಗುಂಡು ಹಾರಿಸುವುದು ಸ್ಪಷ್ಟವಾಗಿ ಕಾಣುತ್ತದೆ. ಮೊದಲ ಗುಂಡಿನಿಂದ ನಾಯಿ ನೋವಿನಿಂದ ನರಳುತ್ತಿದ್ದರೂ, ಆ ಕ್ರೂರಿ ವ್ಯಕ್ತಿ ನಾಯಿ ಸಾಯುವವರೆಗೆ ಮತ್ತೆರಡು ಗುಂಡು ಹಾರಿಸಿದ್ದಾನೆ. ಈ ಅಮಾನುಷ ಕೃತ್ಯವನ್ನು ಕಂಡ ನೆಟ್ಟಿಗರು ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಾಣಿ ಹಿಂಸೆಯ ಈ ಆಘಾತಕಾರಿ ಪ್ರಕರಣವನ್ನು ಪ್ರಾಣಿ ಕಾರ್ಯಕರ್ತರೊಬ್ಬರು “JaspreetSays” ಎಂಬ X (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ಈ ಘಟನೆ ಪ್ರಾಣಿ ದಯಾ ಸಂಘಗಳಲ್ಲೂ ತೀವ್ರ ಖಂಡನೆಗೆ ಒಳಗಾಗಿದೆ. ಪೊಲೀಸರು ವಿಡಿಯೋವನ್ನು ಆಧರಿಸಿ ಆರೋಪಿಯ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.