
ಕುಂದಾಪುರ, ಉಡುಪಿ : ಹನಿ ಟ್ರ್ಯಾಪ್ ಮೂಲಕ ವ್ಯಕ್ತಿಯೊಬ್ಬರನ್ನು ಬಲೆಗೆ ಬೀಳಿಸಿ, ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಆರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ₹18 ಲಕ್ಷ ಮೌಲ್ಯದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳ ವಿವರ:
- ಬೈಂದೂರು, ನಾವುಂದ ಗ್ರಾಮದ ಸವದ್ (28)
- ಕುಂದಾಪುರ, ಗುಲ್ವಾಡಿ ಗ್ರಾಮದ ಸೈಪುಲ್ಲಾ (38)
- ಕುಂದಾಪುರ, ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್ (36)
- ಕುಂದಾಪುರ, ಕುಂಭಾಶಿ ಗ್ರಾಮದ ಅಬ್ದುಲ್ ಸತ್ತಾರ್ (23)
- ಶಿವಮೊಗ್ಗ ಜಿಲ್ಲೆ, ಹೊಸನಗರದ ಅಬ್ದುಲ್ ಅಜೀಜ್ (26)
- ಕುಂದಾಪುರ, ಕೋಡಿ ನಿವಾಸಿ ಆಸ್ಮಾ (43)
ಘಟನೆಯ ವಿವರ: ಸಂದೀಪ್ ಕುಮಾರ್ ಎಂಬವರಿಗೆ ಮೂರು ತಿಂಗಳ ಹಿಂದೆ ಅಬ್ದುಲ್ ಸವಾದ್ ಎಂಬಾತನ ಪರಿಚಯವಾಗಿತ್ತು. ಸವಾದ್, ಆಸ್ಮಾ ಎಂಬ ಮಹಿಳೆಯನ್ನು ಪರಿಚಯಿಸಿ ಅವಳ ಮೊಬೈಲ್ ಸಂಖ್ಯೆ ನೀಡಿ, ಆಕೆಯೊಂದಿಗೆ ಸಂಪರ್ಕದಲ್ಲಿರುವಂತೆ ಹೇಳಿದ್ದ. ಅದರಂತೆ ಸಂದೀಪ್, ಆಸ್ಮಾಳೊಂದಿಗೆ ಮಾತುಕತೆ ನಡೆಸಿದ್ದರು. ಸೆಪ್ಟೆಂಬರ್ 2ರಂದು ಸಂಜೆ 6:30ಕ್ಕೆ ಆಸ್ಮಾ, ಸಂದೀಪ್ ಅವರನ್ನು ಕುಂದಾಪುರದ ಮಾಲ್ನಾಡ್ ಪೆಟ್ರೋಲ್ ಬಂಕ್ ಬಳಿಯ ಆರ್.ಆರ್. ಪ್ಲಾಜಾ ಬಳಿಗೆ ಕರೆಸಿದ್ದಳು.
ಸಂದೀಪ್ ಆಟೋ ರಿಕ್ಷಾದಲ್ಲಿ ಅಲ್ಲಿಗೆ ತಲುಪಿದಾಗ, ಆಸ್ಮಾ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು. ನಂತರ ಆಕೆ, ತನ್ನ ಉಳಿದ ಸಹಚರರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾಳೆ. ತಕ್ಷಣವೇ ಅಲ್ಲಿಗೆ ಬಂದ ಆರೋಪಿಗಳು, ಸಂದೀಪ್ ಅವರಿಗೆ ಚಾಕು ತೋರಿಸಿ ₹3 ಲಕ್ಷ ಹಣ ಕೊಟ್ಟು ಹೋಗುವಂತೆ ಬೆದರಿಸಿದ್ದಾರೆ. ಸಂದೀಪ್ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದಾಗ, ಆರೋಪಿಗಳಾದ ಸವದ್, ಸೈಪುಲ್ಲಾ, ಮೊಹಮ್ಮದ್ ನಾಸೀರ್ ಶರೀಫ್, ಅಬ್ದುಲ್ ಸತ್ತಾರ್ ಮತ್ತು ಅಬ್ದುಲ್ ಅಜೀಜ್ ಸೇರಿಕೊಂಡು ಅವರ ಕೈಗಳನ್ನು ನೈಲಾನ್ ಹಗ್ಗದಿಂದ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ.
ಬಳಿಕ ಸಂದೀಪ್ ಅವರ ಪ್ಯಾಂಟ್ ಜೇಬಿನಲ್ಲಿದ್ದ ₹6,200 ಹಣವನ್ನು ಬಲವಂತವಾಗಿ ಕಸಿದುಕೊಂಡಿದ್ದಾರೆ. ಹೆಚ್ಚು ಹಣ ನೀಡುವಂತೆ ಬೆದರಿಸಿದಾಗ, ಸಂದೀಪ್ ಅವರ ಮೊಬೈಲ್‌ನಿಂದ ಸೈಪುಲ್ಲಾ ಖಾತೆಗೆ ₹30,000 ವರ್ಗಾವಣೆ ಮಾಡಿದ್ದಾರೆ. ಇದಾದ ನಂತರ, ಆರೋಪಿಗಳು ಸಂದೀಪ್ ಅವರ ಎಟಿಎಂ ಕಾರ್ಡ್ ಮತ್ತು ಪಿನ್ ನಂಬರ್ ಪಡೆದುಕೊಂಡು ಬ್ಯಾಂಕಿನಿಂದ ₹40,000 ನಗದನ್ನು ಡ್ರಾ ಮಾಡಿಕೊಂಡಿದ್ದಾರೆ ಎಂದು ಸಂದೀಪ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



































