
ಗುವಾಹಟಿ : ಖ್ಯಾತ ಗಾಯಕ ಜುಬೀನ್ ಗರ್ಗ್ ಅವರು ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಿದ್ದಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಶುಕ್ರವಾರ (ಸೆಪ್ಟೆಂಬರ್ 19) ಕೊನೆಯುಸಿರೆಳೆದಿದ್ದಾರೆ. ಅವರು ನೀರಿನೊಳಗೆ ಇಳಿಯುವ ಕೊನೆಯ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಜುಬೀನ್ ಗರ್ಗ್ ಲೈಫ್ ಜಾಕೆಟ್ ಧರಿಸಿ ನೀರಿಗೆ ಹಾರುವ ದೃಶ್ಯಗಳಿವೆ. ನಂತರ ಅವರು ಸ್ವಲ್ಪ ಸಮಯ ನೀರಿನಲ್ಲಿ ಈಜುವುದನ್ನು ಸಹ ಕಾಣಬಹುದು. ಈ ವಿಡಿಯೋದಲ್ಲಿ ಅವರು ಉಸಿರಾಟದ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ. ಬೋಟ್ ಸಿಬ್ಬಂದಿ ಕೂಡ ಅವರೊಂದಿಗೆ ಇದ್ದರು.

ಅಸ್ಸಾಂ ಮೂಲದ ಜುಬೀನ್ ಗರ್ಗ್, ಕನ್ನಡ ಮತ್ತು ಬಾಲಿವುಡ್ ಸೇರಿದಂತೆ 40ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿ ಖ್ಯಾತರಾಗಿದ್ದರು. ಸಿಂಗಾಪುರದಲ್ಲಿ ಆಯೋಜಿಸಲಾಗಿದ್ದ “ಈಶಾನ್ಯ ಉತ್ಸವ” ಕಾರ್ಯಕ್ರಮದಲ್ಲಿ ಹಾಡಲು ತೆರಳಿದ್ದ ಅವರು, ಸ್ಕೂಬಾ ಡೈವಿಂಗ್‌ಗೆ ಹೋದಾಗ ಈ ದುರ್ಘಟನೆ ಸಂಭವಿಸಿದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ತಕ್ಷಣ, ಅಲ್ಲಿನ ಸಿಬ್ಬಂದಿ ಅವರಿಗೆ ಸಿಪಿಆರ್ ನೀಡಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಖ್ಯಾತಿ ಗಳಿಸಿದ ‘ಯಾ ಆಲಿ’ ಹಾಡು
ಬಾಲಿವುಡ್‌ನ ‘ಗ್ಯಾಂಗ್‌ಸ್ಟರ್’ ಚಿತ್ರದ ‘ಯಾ ಆಲಿ’ ಹಾಡಿನ ಮೂಲಕ ಜುಬೀನ್ ಗರ್ಗ್ ದೇಶಾದ್ಯಂತ ದೊಡ್ಡ ಹೆಸರು ಗಳಿಸಿದ್ದರು. ಸಂಗೀತ ಕುಟುಂಬದಲ್ಲಿ ಜನಿಸಿದ್ದ ಅವರಿಗೆ ವಿಶ್ವವಿಖ್ಯಾತ ಸಂಗೀತಗಾರ ಜುಬೀನ್ ಮೆಹ್ತಾ ಅವರ ಸ್ಫೂರ್ತಿಯಿಂದ ಜುಬೀನ್ ಎಂದು ಹೆಸರಿಡಲಾಗಿತ್ತು. ಅವರು 2002ರಲ್ಲಿ ವಸ್ತ್ರ ವಿನ್ಯಾಸಕಿ ಗರಿಮಾ ಸೈಕಿಯಾರನ್ನು ವಿವಾಹವಾಗಿದ್ದರು. ಅವರ ಹಠಾತ್ ಅಗಲಿಕೆ ಸಂಗೀತ ಲೋಕಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ.



































